ಯಲ್ಲಾಪುರ: ಯಲ್ಲಾಪುರ ಪಟ್ಟಣದ ಕಾಳಮ್ಮ, ದುರ್ಗಮ್ಮ ಗ್ರಾಮ ದೇವಿಯರ ಜಾತ್ರೆ ಫೆ. 22ರಿಂದ ಒಂಬತ್ತು ದಿನಗಳ ಕಾಲ ನಡೆಯಲಿದೆ.
ಶುಕ್ರವಾರ ಸಂಜೆ ಗ್ರಾಮದೇವಿ ದೇವಸ್ಥಾನ ಕಮಿಟಿ ಸಭೆ ಸೇರಿ ಫೆ.22ರಂದು ಜಾತ್ರೆ ನಡೆಸಲು ತೀರ್ಮಾನಿಸಿದೆ. ಜಾತ್ರೆ ಪೂರ್ವದಲ್ಲಿ ನಡೆಸುವ ವಿಶಿಷ್ಟ ಹೊರಮಂಗಳವಾರ ಆಚರಣೆಯನ್ನು ಮೂರು ವಾರ ಆಚರಿಸಲು ನಿರ್ಧರಿಸಲಾಗಿದೆ. ಜನವರಿ 31 ಮೊದಲ ಹೊರ ಮಂಗಳವಾರ ಆಚರಣೆ ನಡೆಯಲಿದೆ. ಫೆ.7 ಮತ್ತು ಜ.14ರಂದು ಎರಡು ಮತ್ತು ಮೂರನೇ ಹೊರ ಮಂಗಳವಾರ ಆಚರಿಸಲಾಗುವುದು. ಮಂಗಳವಾರ ಸಂದರ್ಭದಲ್ಲಿ ಅಂಕೆ ಹಾಕಿದ ಕಾಳಮ್ಮ, ದುರ್ಗಮ್ಮದೇವಿಯರ ಪುನರ್ ಪ್ರತಿಷ್ಠಾಪನೆ ಫೆಬ್ರುವರಿ 21 ರಂದು ನಾಲ್ಕನೇ ಮಂಗಳವಾರ ನಡೆಯಲಿದೆ.
ಫೆ.22ರ ಬೆಳಿಗ್ಗೆ ದೇವಿಯರ ವಿವಾಹ ಮಹೋತ್ಸವದ ಮೂಲಕ ಜಾತ್ರೆ ಆರಂಭಗೊಳ್ಳಲಿದೆ. ಅಂದು ಮಧ್ಯಾಹ್ನ ದೇವಿಯರು ಭಕ್ತರ ತಲೆಯ ಮೇಲೆ ಅತ್ತಿಂದಿತ್ತ ತಿರುಗುತ್ತ ದೇವಿ ಮೈದಾನದಲ್ಲಿ ಪ್ರತಿಷ್ಠಾಪನೆ ಗೊಳ್ಳಲಿದ್ದು, ಫೆ. 23ರಿಂದ ಭಕ್ತರ ಸೇವೆ ಸ್ವೀಕರಿಸುತ್ತಾರೆ. ದೇವಿಯರ ಅಪ್ಪಣೆ ಪಡೆದು ಜಾತ್ರೆಯ ಅಧಿಕೃತ ಪ್ರಕಟಣೆ ಮಂಗಳವಾರವೇ ಹೊರಡಿಸಬೇಕಾಗುತ್ತದೆ. ನ.8ರ ಮಂಗಳವಾರ ಗ್ರಹಣ ಇರುವ ಕಾರಣ ಅಂದು ದೇವಿಯರ ಅಪ್ಪಣೆ ಪಡೆಯಲು ಸಾಧ್ಯವಿಲ್ಲ. ಹೀಗಾಗಿ ನ.15ರಂದು ಅಧಿಕೃತ ಪ್ರಕಟಣೆ ಹೊರಬೀಳಲಿದೆ.
ಫೆ.22ರಿಂದ ಯಲ್ಲಾಪುರ ಗ್ರಾಮದೇವಿ ಜಾತ್ರೆ
