ಕುಮಟಾ: ತಾಲೂಕಿನ ಲುಕ್ಕೇರಿ ಮಾಸೂರಿಗೆ ಹೆಚ್ಚುವರಿ ಬಸ್ ಸೌಲಭ್ಯ ಕಲ್ಪಿಸುವಂತೆ ಒತ್ತಾಯಿಸಿ ಕರವೇ ಗಜಸೇನೆ ನೇತೃತ್ವದಲ್ಲಿ ಆ ಭಾಗದ ವಿದ್ಯಾರ್ಥಿಗಳು ಬಸ್ ಡಿಪೋ ವ್ಯವಸ್ಥಾಪಕರಿಗೆ ಮನವಿ ಸಲ್ಲಿಸಿದರು.
ಎನ್‌ಡಬ್ಲುಕೆಆರ್‌ಟಿಸಿ ತಾಲೂಕು ಘಟಕದ ವ್ಯವಸ್ಥಾಪಕರನ್ನು ಕರವೇ ಗಜಸೇನೆ ನೇತೃತ್ವದಲ್ಲಿ ಭೇಟಿ ಮಾಡಿದ ತಾಲೂಕಿನ ಲುಕ್ಕೇರಿ ಮಾಸೂರ ಭಾಗದ ವಿದ್ಯಾರ್ಥಿಗಳು, ತಾಲೂಕಿನ ಲುಕ್ಕೇರಿ ಮಾಸೂರಿನಲ್ಲಿ ನೂರಾರು ವಿದ್ಯಾರ್ಥಿಗಳು ಕುಮಟಾದ ವಿವಿಧ ಕಾಲೇಜ್‌ಗಳಿಗೆ ವಿದ್ಯಾಭ್ಯಾಸಕ್ಕಾಗಿ ಆಗಮಿಸುತ್ತಾರೆ. ಕಾಲೇಜ್ ಅವಧಿ ಮುಗಿದ ಮೇಲೆ ವಾಪಸ್ ಮನೆಗೆ ತೆರಳಲು ಆ ಭಾಗಕ್ಕೆ ಸೂಕ್ತ ಬಸ್ ವ್ಯವಸ್ಥೆ ಇಲ್ಲ. ಇದರಿಂದ ಸಂಜೆವರೆಗೆ ವಿದ್ಯಾರ್ಥಿಗಳು ಬಸ್ ನಿಲ್ದಾಣದಲ್ಲಿಯೇ ತಾಸುಗಳ ಕಾಲ ಕಾಯುವ ದುಃಸ್ಥಿತಿ ಎದುರಾಗಿದೆ. ಅಲ್ಲದೇ ವಾರ್ಷಿಕ ಪರೀಕ್ಷೆ ಕೂಡ ಹತ್ತಿರ ಬರುತ್ತಿರುವುದರಿಂದ ವಿದ್ಯಾರ್ಥಿಗಳಿಗೆ ಓದಿಕೊಳ್ಳಲು ಸಮಯಾವಕಾಶದ ಕೊರತೆ ಉಂಟಾಗದಂತೆ ಪ್ರತಿನಿತ್ಯ ಮಧ್ಯಾಹ್ನ 3.30 ಅಥವಾ 3.45 ಗಂಟೆಗೆ ಹೆಚ್ಚುವರಿ ಬಸ್ ಸೌಲಭ್ಯ ಕಲ್ಪಿಸಬೇಕು ಎಂದು ಆಗ್ರಹಿಸಿದರು.
ಈಗಿರುವ ನಿಗದಿತ ಸಮಯದಲ್ಲಿಯೂ ಲುಕ್ಕೇರಿ ಮಾಸೂರಿಗೆ ಬಸ್ ಸಂಚರಿಸುವ ವ್ಯವಸ್ಥೆ ಮಾಡಬೇಕು. ಈ ಸಂಬಂಧ ಈಗಾಗಲೇ ಗ್ರಾಪಂ ಅಧಿಕಾರಿಗಳ ಮೂಲಕ ತಮಗೆ ಮನವಿ ರವಾನಿಸಿದ್ದೆವು. ಆದರೆ ಯಾವುದೇ ಸ್ಪಂದನೆ ದೊರೆತಿಲ್ಲ. ಈಗಲಾದರೂ ಮನವಿಗೆ ಸ್ಪಂದಿಸಿ ಹೆಚ್ಚುವರಿ ಬಸ್ ಸೌಲಭ್ಯ ಕಲ್ಪಿಸಬೇಕು. ಇಲ್ಲವಾದರೆ ಮುಂದಿನ ದಿನಗಳಲ್ಲಿ ಕರವೇ ಗಜಸೇನೆ ನೇತೃತ್ವದಲ್ಲಿ ಪ್ರತಿಭಟನೆ ಹಮ್ಮಿಕೊಳ್ಳುವುದು ಅನಿವಾರ್ಯವಾಗುತ್ತದೆ ಎಂದು ಮನವಿಯಲ್ಲಿ ಎಚ್ಚರಿಸಲಾಗಿದೆ.
ಮನವಿ ಸಲ್ಲಿಕೆಯಲ್ಲಿ ಕರವೇ ಗಜ ಸೇನೆ ಉಪಾಧ್ಯಕ್ಷ ವೆಂಕಟೇಶ ಕೋಡಿಯಾ, ಪ್ರಮುಖರಾದ ವಿನೋದ ಹರಿಕಂತ್ರ, ನಾಗರಾಜ ಅಂಬಿಗ, ರಾಜೇಶ ಮಡಿವಾಳ ಪ್ರವೀಣ ಶೆಟ್ಟಿ, ಕಾಲೇಜ್ ವಿದ್ಯಾರ್ಥಿಗಳಿದ್ದರು.