ಶಿರಸಿ: ಭೂಮಿ ಹಕ್ಕು, ಸರ್ವಋತು ರಸ್ತೆ ಹಾಗೂ ಮೂಲಭೂತ ಸೌಲಭ್ಯದಿಂದ ವಂಚಿತರಾದ ಶಿರಸಿ ತಾಲೂಕ, ಮಂಜಗುಣಿ ಗ್ರಾಮ ಪಂಚಾಯತ ವ್ಯಾಪ್ತಿಯ ಗ್ರಾಮಸ್ಥರ ಹಕ್ಕಿಗಾಗಿ ನಡಿಗೆ ಕಾರ್ಯಕ್ರಮವನ್ನು ನ.9 ಮುಂಜಾನೆ 9 ಗಂಟೆಗೆ ಕಿರಿಯ ಪ್ರಾಥಮಿಕ ಶಾಲೆ ಸವಲೆಯಿಂದ ಮಂಜಗುಣಿ ಗ್ರಾಮ ಪಂಚಾಯತ ಕಾರ್ಯಾಲಯದವರೆಗೆ ಹತ್ತು ಕಿ.ಮೀ ನಡಿಗೆ ಕಾರ್ಯಕ್ರಮ ಜರುಗಲಿದೆ ಎಂದು ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆ ಆದ್ಯಕ್ಷ ರವೀಂದ್ರ ನಾಯ್ಕ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಮಂಜಗುಣಿ ಗ್ರಾಮ ಪಂಚಾಯತ ವ್ಯಾಪ್ತಿಯಲ್ಲಿ ಸುಮಾರು ಎರಡು ಸಾವಿರ ಜನಸಂಖ್ಯೆ ಒಳಗೊಂಡಿದ್ದು, ಸುಮಾರು 705 ವಾಸ್ತವ್ಯ ಇಮಾರತ್ತನ್ನು ಒಳಗೊಂಡಿದೆ. ಗ್ರಾಮದಲ್ಲಿ ಅಧೀಕೃತ ನಿವೇಶನ ಹೊಂದಿರದ ಕುಟುಂಬವು 165 ಗಳಿದ್ದು, ಅರಣ್ಯ ಅತಿಕ್ರಮಣದಾರರ ಕುಟುಂಬ ಭೂಮಿ ಹಕ್ಕಿನ ನಿರೀಕ್ಷೆಯಲ್ಲಿರುವವರು 257 ಕುಟುಂಬಗಳಾಗಿವೆ. ಪ್ರಾಥಮಿಕ ಶಾಲೆಯ ಕಟ್ಟಡ ಶಿಥಿಲತೆ, ಸ್ವಚ್ಛತೆ, ಶಾಶ್ವತ ಕುಡಿಯುವ ನೀರಿನ ಕೊರತೆ, ಪ್ರಖ್ಯಾತ ದೇವಾಲಯವಾದ ವೆಂಕಟರಮಣ ದೇವಾಲಯ ಪ್ರವಾಸೋದಮ ಅಭಿವೃದ್ಧಿ ಮತ್ತು ಆಕರ್ಷಣೆಗೆ ಪೂರಕ ಕಾರ್ಯ ಯೋಜನೆಗಳ ಕೊರತೆ ಪಂಚಾಯತ ವ್ಯಾಪ್ತಿಯಲ್ಲಿ ಕಂಡು ಬರುವುದರಿಂದ ಸರಕಾರದ ಗಮನ ಸೆಳೆಯಲು ಹಳ್ಳಿ ಕಡೆ ನಡಿಗೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಅವರು ಹೇಳಿದರು.
ಗ್ರಾಮ ಪಂಚಾಯತ ವ್ಯಾಪ್ತಿಯಲ್ಲಿ 39 ಮಜರೆಗಳಿದ್ದು, ಅವುಗಳಲ್ಲಿ ಸುಮಾರು 26 ಮಜರೆಗಳಿಗೆ ಡಾಂಬರೀಕರಣ ಅಥವಾ ಕಡೀಕರಣ ಇಲ್ಲದಿರುವ ಅಂಶವನ್ನ ಸರಕಾರದ ಗಮನಕ್ಕೆ ತರಲಾಗುವುದೆಂದು ಹಾಗೂ ಆಸಕ್ತ ಗ್ರಾಮಸ್ಥರು ಆಗಮಿಸಬೇಕೆಂದು ಪ್ರಕಟಣೆಯಲ್ಲಿ ಕೋರಿದ್ದಾರೆ.