ಅಂಕೋಲಾ: ಮನೆಯಿಂದಲೇ ಕೆಲಸ ಮಾಡಿ ಹಣ ಗಳಿಸುವ ಆಮಿಷಕ್ಕೆ ಒಳಗಾಗಿ ವ್ಯಕ್ತಿಯೋರ್ವ ಹಣ ಕಳೆದುಕೊಂಡು ವಂಚನೆಗೊಳಗಾದ ಘಟನೆ ನಡೆದಿದೆ.
ಶಂಶಾದ್ ಮಹಮ್ಮದಲಿ ನದಾಫ್ (25) ವಂಚನೆಗೊಳಗಾದವರು. ಮೂಲತಃ ರೋಣ ತಾಲೂಕಿನ ನರೇಗಲ್ ನಿವಾಸಿಯಾಗಿರುವ ಈತ ಪಟ್ಟಣದ ಆರ್.ಎನ್.ನಾಯಕ ಮತ್ತು ಕಮಲಾ ಆಸ್ಪತ್ರೆಯಲ್ಲಿ ಲ್ಯಾಬ್ ಟೆಕ್ನಿಶಿಯನ್ ಆಗಿ ಕೆಲಸ ಮಾಡಿಕೊಂಡಿದ್ದ. ಈ ವೇಳೆ ಅದು ಹೇಗೋ ನೇತ್ರಾ ಎನ್ನುವವಳು ಪರಿಚಯವಾಗಿ ವರ್ಕ್ ಫ್ರಮ್ ಹೋಂ ಕೆಲಸ ಮಾಡಿದರೆ ತಿಂಗಳಿಗೆ ರೂ15,000 ಸಂಬಳ ನೀಡುವದಾಗಿ ಹೇಳಿದ್ದಾಳೆ.
ಆ.13ರಂದು ರಜಿಸ್ಟ್ರೇಶನ್ ಫಾರ್ಮ್ ಚಾರ್ಜ್ ಎಂದು ರೂ.3000ನ್ನು ಫೋನ್ ನಂಬರ್ ಒಂದಕ್ಕೆ ಫೋನ್ ಪೇ ಮೂಲಕ ಹಾಕಿಸಿಕೊಂಡಿದ್ದಾಳೆ. ನಂತರ ಅ.10ರವರೆಗೆ ಎಂಟ್ರನ್ಸ್ ಫೀ, ಇಸಿಎಸ್ ಫೀ, ವರ್ಕ್ ಡಿಪಾರ್ಟ್ಮೆಂಟ್ ಹೀಗೆ ಹಲವು ಕಾರಣಗಳನ್ನು ಹೇಳಿ ಫೋನ್ ಪೇ ಮುಖಾಂತರ ರೂ.12,800 ಹಾಗೂ ಎಸ್‌ಬಿಐ ಖಾತೆಯೊಂದಕ್ಕೆ ರೂ.18,000, ಒಟ್ಟೂ ರೂ30000 ಹಣವನ್ನು ಹಾಕಿಸಿಕೊಂಡಿದ್ದಾಳೆ. ಆದರೆ ಸಂಬಳವನ್ನೂ ನೀಡದೆ ಪಡೆದುಕೊಂಡ ಹಣವನ್ನೂ ವಾಪಸ್ ಕೊಡದೆ ವಂಚಿಸಿದ್ದಾಳೆ ಎಂದು ಶಂಶಾದ್ ಇದೀಗ ಪೊಲೀಸ್ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ.