Slide
Slide
Slide
previous arrow
next arrow

ಮುಡಗೇರಿ ಪಂಚಾಯತಿ ಪ್ರತಿನಿಧಿಗಳ ಟೀಕೆ : ಕೈಲಾಗದವನು ಮೈಪರಚಿಕೊಂಡಂತಾಗಿದೆ ಸತೀಶ್ ಸೈಲ್ ಪರಿಸ್ಥಿತಿ

300x250 AD

ಕಾರವಾರ: ಚುನಾವಣೆ ಬಂದಾಗ ಶಾಸಕರು ಭರವಸೆಗಳ ಮಹಾಪೂರ ಹರಿಸುತ್ತಿದ್ದಾರೆ ಎಂದು ಮಾಜಿ ಶಾಸಕ ಸೈಲ್ ಕಣ್ಣೀರು ಸುರಿಸುತ್ತಿರುವುದನ್ನು ನೋಡಿದರೆ ಅಯ್ಯೋ ಎನಿಸದೆ ಇರದು. ಸೈಲ್ ಶಾಸಕರಾಗಿದ್ದಾಗ ಮಾಡದೆ ಇರುವ ಕೆಲಸಗಳನ್ನು ನಮ್ಮ ನೆಚ್ಚಿನ ಶಾಸಕರಾದ ರೂಪಾಲಿ ಎಸ್.ನಾಯ್ಕ ಅವರು ನೆರವೇರಿಸುತ್ತಿರುವುದನ್ನು ಸಹಿಸಲಾರದೆ ಈ ರೀತಿ ಆರೋಪ ಮಾಡುತ್ತಿದ್ದಾರೆ ಎಂದು ಮುಡಗೇರಿ ಗ್ರಾಮ ಪಂಚಾಯತ ಪ್ರತಿನಿಧಿಗಳು ಟೀಕಿಸಿದ್ದಾರೆ.
ಸೈಲ್ ಒಬ್ಬ ಅಭಿವೃದ್ಧಿಯ ವಿರೋಧಿ. ನಮ್ಮ ಹೆಮ್ಮೆಯ ಶಾಸಕರು ಈಗ ಮಾತ್ರವಲ್ಲ, ನಿರಂತರವಾಗಿ ಅಭಿವೃದ್ಧಿ ಕಾರ್ಯಗಳನ್ನು ಮಾಡುತ್ತಿದ್ದಾರೆ. ಬೇಕಿದ್ದರೆ ರೂಪಾಲಿ ನಾಯ್ಕ ಅವರು ಶಾಸಕರಾದ ಮೇಲೆ ಏನೆಲ್ಲ ಅಭಿವೃದ್ಧಿ ಕಾರ್ಯ ಮಾಡಿದ್ದಾರೆ ಎನ್ನುವುದನ್ನು ಮಾಹಿತಿ ಹಕ್ಕಿನಲ್ಲಿ ಅಧಿಕೃತವಾಗಿ ಪಡೆದು ಬಹಿರಂಗಗೊಳಿಸಲಿ. ಅಭಿವೃದ್ಧಿ ಎನ್ನುವುದು ನಿರಂತರವಾದುದು. ಅದಕ್ಕೆ ಕೊನೆ ಇಲ್ಲ. ಶಾಸಕರು ಚುನಾವಣೆ ಘೋಷಣೆಯಾಗುವ ತನಕವೂ ಅಭಿವೃದ್ಧಿಯಿಂದ ವಿರಮಿಸುವುದಿಲ್ಲ. ನಮ್ಮ ಶಾಸಕರ ಅಭಿವೃದ್ಧಿಕಾರ್ಯಗಳನ್ನು ನೋಡಿ ಹೊಟ್ಟೆಕಿಚ್ಚಿನಿಂದ ಸೈಲ್ ಈ ರೀತಿ ಆರೋಪ ಮಾಡುತ್ತಿದ್ದಾರೆ.
ಮುಡಗೇರಿ ನಿರಾಶ್ರಿತರಿಗೆ ಹೆಚ್ಚುವರಿ ಪರಿಹಾರ ಅಂದರೆ ಮಾರುಕಟ್ಟೆ ದರವನ್ನು ಒದಗಿಸಬೇಕೆಂದು ನಮ್ಮ ಶಾಸಕರು ಕೈಗಾರಿಕಾ ಸಚಿವರಾದ ಮುರಗೇಶ್ ನಿರಾಣಿ ಅವರಿಗೆ ಮನವಿ ಮಾಡಿದ್ದಲ್ಲದೆ, ಚರ್ಚೆ ನಡೆಸಿದಾಗ ಅವರು ತಾತ್ವಿಕವಾಗಿ ಒಪ್ಪಿಕೊಂಡಿದ್ದಾರೆ. ಈಗ ಹೆಚ್ಚುವರಿ ಪರಿಹಾರ ನೀಡುವ ಪ್ರಕ್ರಿಯೆ ಶುರುವಾಗಿದೆ. ನಮ್ಮ ಶಾಸಕರು ಹೆಚ್ಚುವರಿ ಪರಿಹಾರವನ್ನು ಕೊಡಿಸುತ್ತಾರೆ ಎನ್ನುವ ವಿಶ್ವಾಸ ಇದೆ. ಸೈಲ್ ಶಾಸಕರಾಗಿದ್ದಾಗ ಮುಡಗೇರಿ ನಿರಾಶ್ರಿತರ ಬಗ್ಗೆ ಏನೂ ಮಾಡದೆ ಈಗ ಬೇರೆಯವರು ಹೆಚ್ಚುವರಿ ಪರಿಹಾರ ಕೊಡಿಸುವುದನ್ನು ಅರಗಿಸಿಕೊಳ್ಳಲಾರದೆ ಅಲವತ್ತುಕೊಳ್ಳುತ್ತಿದ್ದಾರೆ. ನಿರಾಶ್ರಿತರಿಗೆ ಹೆಚ್ಚುವರಿ ಪರಿಹಾರ ಕೊಡಿಸುವುದು ಸೈಲ್ ಗೆ ಬೇಕಿಲ್ಲ ಎನ್ನುವುದು ಇದರಿಂದ ಸ್ಪಷ್ಟವಾಗುತ್ತದೆ.
ಸೈಲ್ ಅವರೇ ನೀವು ಶಾಸಕರಾಗಿದ್ದಾಗ ಏನು ಮಾಡಿದ್ದೀರಿ ಎನ್ನುವುದು ಇಡಿ ನಾಡಿನ ಜನತೆಗೆ ಗೊತ್ತಿದೆ. ಕೈಲಾಗದವನು ಮೈಪರಚಿಕೊಂಡಂತಾಗಿದೆ ಸೈಲ್ ಪರಿಸ್ಥಿತಿ. ಒಂದೂವರೆ ವರ್ಷಗಳ ಕಾಲ ಎಲ್ಲಿ ಅಡಗಿ ಕುಳಿತಿದ್ದೀರಿ. ಯಾಕಾಗಿ ಅಲ್ಲಿಗೆ ಹೋಗಿದ್ದೀರಿ ಎನ್ನುವುದೂ ಗೊತ್ತಿದೆ. ನಮ್ಮ ಮಣ್ಣಿನ ಬಗ್ಗೂ ಕಾಳಜಿ ಇಲ್ಲದೆ ನೈತಿಕವಾಗಿ ದಿವಾಳಿಯಾದ ನಿಮ್ಮಿಂದ ಯಾವ ಸರ್ಟಿಫಿಕೇಟಿನ ಅಗತ್ಯವೂ ಇಲ್ಲ. ನಮ್ಮ ಕ್ಷೇತ್ರದ ಜನತೆಗೆ ಯಾರು ಏನು ಎನ್ನುವುದು ಗೊತ್ತಿದೆ. ನಮ್ಮ ಶಾಸಕರಿಗೆ ಕ್ಷೇತ್ರದ ಜನತೆ ನೀಡಿದ, ನೀಡುವ ಸರ್ಟಿಫಿಕೇಟ್ ಮುಖ್ಯವೇ ಹೊರತೂ, ನಮ್ಮ ನಾಡಿಗೆ ದ್ರೋಹ ಬಗೆದ ಆರೋಪ ಎದುರಿಸುತ್ತಿರುವ ನಿಮ್ಮ ತೆಗಳಿಕೆಗೆ ನಾವು ಕುಗ್ಗುವುದೂ ಇಲ್ಲ. ಹೊಗಳಿಕೆಗೆ ಹಿಗ್ಗುವುದೂ ಇಲ್ಲ. ನಿಮಗೆ ಬಂದ ಪರಿಸ್ಥಿತಿ ಬೇರೆ ಯಾರಿಗೇ ಬಂದಿದ್ದರೂ ಸಾರ್ವಜನಿಕವಾಗಿ ಮುಖ ತೋರಿಸಲೂ ಆಗದೆ ಇರುತ್ತಿದ್ದರು. ಆದರೆ ಬೆಕ್ಕು ಕಣ್ಣು ಮುಚ್ಚಿ ಹಾಲುಕುಡಿದಂತೆ ನಿಮ್ಮ ಭಂಡ ಧೈರ್ಯವನ್ನು ಮೆಚ್ಚಲೇಬೇಕು.
ಶಾಸಕರಾಗಿ ನೀವೆಷ್ಟು ಜನರಿಗೆ ಉದ್ಯೋಗ ಕೊಡಿಸಿದ್ದೀರಿ. ಯುವಕರಿಗಾಗಿ ಏನು ಮಾಡಿದ್ದೀರಿ ಅದನ್ನು ದಾಖಲೆಗಳ ಸಹಿತ ಬಹಿರಂಗಪಡಿಸಿ. ಸೀಬರ್ಡ್ ನಿರಾಶ್ರತರಿಗೆ ಪರಿಹಾರ ಕೊಡಿಸಲು ನಿಮ್ಮಿಂದ ಏಕೆ ಆಗಲಿಲ್ಲ. ಅಭಿವೃದ್ಧಿ ಕಾರ್ಯಗಳಿಗೆ ಅರ್ಜಿ ಕೊಟ್ಟರೆ ತಪ್ಪೇನು. ಯಾವೆಲ್ಲ ಕೆಲಸಗಳನ್ನು ಮಾಡಿದ್ದಾರೆ ಎನ್ನುವುದನ್ನು ಅಧಿಕೃತವಾಗಿ ತಿಳಿದುಕೊಳ್ಳಿ. ನಿಮ್ಮಿಂದ ಕನಿಷ್ಠ ಆ ಕೆಲಸವೂ ಆಗಿಲ್ಲವಲ್ಲ ಎಂಬ ಖೇದ ನಮಗುಂಟಾಗಿದೆ.
ಚುನಾವಣೆ ಬಂದಾಗ ನಮ್ಮ ಶಾಸಕರು ಎಚ್ಚೆತ್ತುಕೊಂಡಿದ್ದಲ್ಲ. ಅವರು ಆರಂಭದಿಂದಲೂ ಚುರುಕಿನಿಂದ ಕೆಲಸ ಮಾಡುತ್ತಲ್ಲೇ ಇದ್ದಾರೆ. ಚುನಾವಣೆ ಬರುವ ತನಕ ಬೇರೆ ಪಕ್ಷಕ್ಕೆ ಹೋಗಲು ಪರದಾಡುತ್ತಿದ್ದ ನಿಮಗೆ ಬಾಗಿಲು ಬಂದ್ ಆಗುತ್ತಿದ್ದಂತೆ ಎಚ್ಚೆತ್ತುಕೊಂಡಿದ್ದೀರಿ. 2-3 ವರ್ಷಗಳ ಕಾಲ ನೀವು ನಿಮ್ಮ ಪಕ್ಷದಲ್ಲಿ ನಿಷ್ಕ್ರಿಯವಾಗಿರುವುದನ್ನು ನಿಮ್ಮ ಪಕ್ಷದವರೇ ಎತ್ತಿ ತೋರಿಸಿದ್ದಾರೆ. ನಮ್ಮ ಹೆಮ್ಮೆಯ ಶಾಸಕರು ನಡೆಸುವ ಅಭಿವೃದ್ಧಿಪರ ಚಟುವಟಿಕೆಗಳನ್ನೂ ಸಹಿಸದೆ ಹೊಟ್ಟೆ ಉರಿಯಿಂದ ಕಲ್ಲು ಹಾಕಲು ಹೋದರೆ ಜನರೇ ಉತ್ತರ ನೀಡುತ್ತಾರೆ. ನಮ್ಮ ಶಾಸಕರು ಉತ್ತರದಾಯಿ ಆಗಿರುವುದು ಆಶೀರ್ವದಿಸಿದ ಕ್ಷೇತ್ರದ ಜನತೆಗೇ ಹೊರತೂ ನಿಮ್ಮಂತಹ ಎಡಬಿಡಂಗಿಗಳಿಗಲ್ಲ ಎಂದು ಮುಡಗೇರಿ ಗ್ರಾ.ಪಂ ಅಧ್ಯಕ್ಷೆ ಸೀಮಾ ನಾಯ್ಕ, ಉಪಾಧ್ಯಕ್ಷ ಸುನೀಲ ನಾಯ್ಕ, ಸದಸ್ಯರಾದ ಸುರೇಂದ್ರ ಗಾಂವಕರ, ನಂದಕಿಶೋರ ನಾಯ್ಕ, ಜ್ಯೋತಿ ಚೋಳಾರ, ಮೇಲಿಂಡಾ ಬಸ್ತ್ಯಾಂವ್ ಡಿಸೋಜಾ ಜಂಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

300x250 AD
Share This
300x250 AD
300x250 AD
300x250 AD
Back to top