ಹಳಿಯಾಳ: ರಾಜ್ಯ ಸರ್ಕಾರ ನ.10ರಂದು ಸಕ್ಕರೆ ಕಾರ್ಖಾನೆ ಮಾಲೀಕರು ಹಾಗೂ ರೈತ ಪ್ರತಿನಿಧಿಗಳ ಸಭೆ ಕರೆದಿದ್ದು, ಸಭೆಯಲ್ಲಿ ಚರ್ಚಿಸಿ ರೈತರಿಗೆ ಅನುಕೂಲಕರ ನಿರ್ಧಾರ ಕೈಗೊಳ್ಳುವುದಾಗಿ ಸಕ್ಕರೆ ಮಂತ್ರಿ ಶಂಕರ್ ಪಾಟೀಲ್ ಮುನೇನಕೊಪ್ಪ ಭರವಸೆ ನೀಡಿರುವ ಕಾರಣ ಅಲ್ಲಿ ತನಕ ಶಾಂತಿಯುತ ಧರಣಿ ಮುಂದುವರಿಸಲು ತೀರ್ಮಾನಿಸಲಾಗಿದೆ ಎಂದು ಕಬ್ಬು ಬೆಳೆಗಾರರ ಸಂಘದ ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾರ್ ತಿಳಿಸಿದ್ದಾರೆ.
ಸಕ್ಕರೆ ಹಾಗೂ ಕಬ್ಬು ಅಭಿವೃದ್ಧಿ ಆಯುಕ್ತರು ಸಕರೆ ಕಾರ್ಖಾನೆಯ ಕಬ್ಬು ಕಟಾವು ಸಾಗಾಣಿಕೆ ವೆಚ್ಚದ ಬಗ್ಗೆ ರಾಜ್ಯ ಸರ್ಕಾರಕ್ಕೆ ವರದಿ ನೀಡಿದ ನಂತರ ವರದಿ ಆಧರಿಸಿ ಸರ್ಕಾರ ಸಕ್ಕರೆ ಕಾರ್ಖಾನೆಗೆ ಕಟಾವು ಸಾಗಾಣಿಕೆ ವೆಚ್ಚ ಕಡಿಮೆ ಮಾಡಲು ಸೂಚನೆ ನೀಡಿ ಆದೇಶ ಹೊರಡಿಸಿದರೆ ಈ ಬಗ್ಗೆ ಜಿಲ್ಲಾಧಿಕಾರಿಗಳು ಘೋಷಣೆ ಮಾಡಿ, ಧರಣಿ ನಿರತ ರೈತರ ಜೊತೆ ಚರ್ಚೆ ಮಾಡಿದರೆ ಚಳುವಳಿ ನಿರತ ರೈತರು ಪುನರ್ ಪರಿಶೀಲನೆ ನಡೆಸುತ್ತೇವೆ. ಸಕ್ಕರೆ ಕಾರ್ಖಾನೆಯವರು ಕಬ್ಬು ಬೆಳೆಗಾರ ರೈತರಿಗೆ ನೀಡುವ ದರವನ್ನ ಬಹಿರಂಗವಾಗಿ ಪ್ರಕಟಿಸಿದ ನಂತರ ಮತ್ತೆ ಉತ್ತರ ಕನ್ನಡ ಹಾಗೂ ಧಾರವಾಡ ಜಿಲ್ಲಾ ಸಂಘಟನೆಯ ಪದಾಧಿಕಾರಿಗಳು ಚರ್ಚಿಸಿ ತೀರ್ಮಾನ ಪ್ರಕಟಿಸಲಿದ್ದಾರೆ ಎಂದು ಅವರು ತಿಳಿಸಿದ್ದಾರೆ.
ಸಭೆಯಲ್ಲಿ ಸುಮಾರು 20 ರೈತರು ಅಭಿಪ್ರಾಯ ನೀಡಿದರು. ರವಿಸುಂಟಕರ್‌ರವರು ಸಕ್ಕರೆ ಕಾರ್ಖಾನೆ ಆರಂಭಿಸಿ ಕಬ್ಬು ಅರೆಯಲು ನಿರ್ಣಯ ಕೈಗೊಳ್ಳಬೇಕು ಎಂದು ಸೂಚಿಸಿದಾಗ ಸಭೆಯಲ್ಲಿದ್ದ ಎಲ್ಲಾ ಸಾವಿರಾರು ರೈತರು ಆಕ್ರೋಶಗೊಂಡು ಅವರ ವಿರುದ್ಧ ಘೋಷಣೆ ಕೂಗಿದರು. ಎಲ್ಲರನ್ನು ಸಮಾಧಾನಪಡಿಸಿ ಸಭೆಯನ್ನು ಶಾಂತ ರೀತಿಗೆ ತಂದ ನಂತರ, ಅಂತಿಮ ನಿರ್ಣಯ ಪ್ರಕಟಿಸಲಾಯಿತು.
ಜಿಲ್ಲಾಧ್ಯಕ್ಷ ಕುಮಾರ್ ಬುಬಾಟಿ, ಧಾರವಾಡ ಜಿಲ್ಲಾಧ್ಯಕ್ಷ ನಿಜಗುಣ ಕೆಲಗೇರಿ, ನಾಗೇಂದ್ರ ಜಿಒಜಿ, ಶಂಕರ್ ಕಾಜಗಾರ್, ಅಶೋಕ್ ಮೇಟಿ ,ಎಮ ವಿ ಗಾಡಿ, ಸುರೇಶ್ ಶಿವಣ್ಣನವರ್,ಎಸ್ ಕೆ ಗೌಡ, ಮಂಜುಳಗೌಡ, ವಾಸು, ಬಸವರಾಜ್ ಬೆಂಡಿಗೇರಿ, ಅಪ್ಪಾರಾವ್ ಪೂಜಾರಿ, ಸಾತೂರಿಗೂಡೆಮನಿ, ಪರಶುರಾಮ್, ಮುಂತಾದವರು ಸಭೆಯಲ್ಲಿ ಅಭಿಪ್ರಾಯ ಮಂಡಿಸಿದರು.