ಕುಮಟಾ: 2021-22ನೇ ಶೈಕ್ಷಣಿಕ ವರ್ಷದ ಬಾಕಿಯಿರುವ ವಿದ್ಯಾರ್ಥಿ ವೇತನವನ್ನು ಶೀಘ್ರ ಬಿಡುಗಡೆ ಮಾಡುವಂತೆ ಮತ್ತು ಯುಯುಸಿಎಂಸಿ ತಂತ್ರಾಂಶವನ್ನು ಸರಿಪಡಿಸಿ, ಫಲಿತಾಂಶ ಪ್ರಕಟಿಸುವಂತೆ ಆಗ್ರಹಿಸಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ತಾಲೂಕು ಘಟಕವು ತಹಸೀಲ್ದಾರ್ ವಿವೇಕ ಶೇಣ್ವಿ ಅವರಿಗೆ ಮನವಿ ಸಲ್ಲಿಸಿತು.
ಲಕ್ಷಾಂತರ ಬಡ ವಿದ್ಯಾರ್ಥಿಗಳು ಪ್ರತಿ ವರ್ಷ ವಿದ್ಯಾರ್ಥಿ ವೇತನಕ್ಕಾಗಿ ಅರ್ಜಿ ಸಲ್ಲಿಸಿ, ಅಲ್ಲಿಂದ ಬರುವ ಹಣವನ್ನು ತಮ್ಮ ಶಿಕ್ಷಣಕ್ಕೆ ಬಳಸಿಕೊಳ್ಳುತ್ತಾರೆ. ಆದರೆ ಈ ಬಾರಿ ವಿದ್ಯಾರ್ಥಿ ವೇತನದ ತಂತ್ರಾಂಶದಲ್ಲಿ ಅರ್ಜಿ ಸಲ್ಲಿಸಿದ ನಂತರ ವಿದ್ಯಾರ್ಥಿ ವೇತನ ಬಿಡುಗಡೆಯಾದ ಬಗ್ಗೆ ನಮೂದಿಸಲಾಗಿದೆ. ಆದರೆ ಬಹುತೇಕ ವಿದ್ಯಾರ್ಥಿಗಳಿಗೆ ಈತನಕ ವೇತನ ಬಿಡುಗಡೆಯಾಗಿಲ್ಲ. ಹಾಗಾಗಿ ಸರ್ಕಾರ ಈ ಬಗ್ಗೆ ಸೂಕ್ತವಾಗಿ ಗಮನ ಹರಿಸಿ, ಬಾಕಿಯಿರುವ ವಿದ್ಯಾರ್ಥಿ ವೇತನವನ್ನು ಶೀಘ್ರ ಬಿಡುಗಡೆ ಮಾಡಬೇಕು. ಅಲ್ಲದೇ ಇದರಲ್ಲಿ ಅವ್ಯವಹಾರವಾದ ಬಗ್ಗೆ ಶಂಕೆ ವ್ಯಕ್ತವಾಗಿದ್ದು, ಸೂಕ್ತ ತನಿಖೆ ನಡೆಸಬೇಕೆಂದು ಒತ್ತಾಯಿಸಲಾಗಿದೆ.
ಎನ್‌ಇಪಿ ಜಾರಿಯಾದ ನಂತರ ಎಲ್ಲ ವಿಶ್ವವಿದ್ಯಾಲಯದಲ್ಲಿ ಯುಯುಸಿಎಂಸಿ ತಂತ್ರಾಂಶದಲ್ಲಿ ಬಳಸಿ ದಾಖಲಾತಿಯಿಂದ ಫಲಿತಾಂಶದ ವರೆಗೆ ಎಲ್ಲ ಮಾಹಿತಿಯನ್ನು ಇದರ ಮೂಲಕ ನಮೂದಿಸಲಾಗುತ್ತದೆ. ಆದರೆ ಆ ತಂತ್ರಾಂಶದಲ್ಲಿ ಕೆಲ ಸಮಸ್ಯೆಗಳಾಗಿದ್ದು, ತಂತ್ರಾಂಶವನ್ನು ಶೀಘ್ರ ಸರಿಪಡಿಸಿ, ಫಲಿತಾಂಶ ಪ್ರಕಟಿಸುವಂತೆ ಮನವಿಯಲ್ಲಿ ಆಗ್ರಹಿಸಲಾಗಿದೆ.
ಮನವಿ ಸಲ್ಲಿಕೆಯಲ್ಲಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಜಿಲ್ಲಾ ಸಂಚಾಲಕ ಸುಜಲ್ ಶೇಟ್, ಇತರರು ಇದ್ದರು.