ಅಂಕೋಲಾ: ಪಟ್ಟಣದ ಕಲ್ಪವೃಕ್ಷ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ಕೇಂದ್ರದಲ್ಲಿ ಕನ್ನಡ ಕಲ್ಪವೃಕ್ಷವಾಗಲಿ, ಕನ್ನಡದ ಕಂಪು ಸಾಗರದ ಅಂಚಿಗೆ ತಲುಪಲಿ ಎನ್ನುವ ಘೋಷವಾಕ್ಯದೊಂದಿಗೆ ವಿಶೇಷವಾಗಿ ಕನ್ನಡ ಪುಸ್ತಕಗಳಿಗೆ ಪೂಜೆ ಸಲ್ಲಿಸಿ ಕನ್ನಡ ರಾಜ್ಯೋತ್ಸವ ಆಚರಿಸಲಾಯಿತು.
ಕಾರ್ಯಕ್ರಮದಲ್ಲಿ ಕನ್ನಡದ ಏಕೀಕರಣ ಕುರಿತು ವಿಶೇಷ ಉಪನ್ಯಾಸ ನೀಡಿದ ಕಲ್ಪವೃಕ್ಷ ಸಂಸ್ಥೆಯ ಮಾರ್ಗದರ್ಶಕ ಸುಧಾಕರ ಎಸ್.ಕಟ್ಟೇಮನೆ, ಕನ್ನಡ ಭಾಷಾ ಪರಂಪರೆ ಶ್ರೀಮಂತವಾಗಿದೆ. ಹತ್ತು ಹಲವು ಎಡರು ತೊಡರುಗಳನ್ನು ಮಣಿಸಿ ಕನ್ನಡ ನಾಡು ಏಕೀಕರಣವಾಗಿದೆ. ಕನ್ನಡ ಭಾಷೆಯ ಅರಿವು ವ್ಯಕ್ತಿಗೆ ತನ್ನಿಂದ ತಾನೇ ಆತ್ಮ ವಿಶ್ವಾಸ ಮೂಡಿಸುತ್ತದೆ ಎಂದರು.
ಕಲ್ಪವೃಕ್ಷ ಸಂಸ್ಥೆಯ ನಿರ್ದೇಶಕ ಮಾರುತಿ ಹರಿಕಂತ್ರ ಮಾತನಾಡಿ, ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಹಿಂದಿ, ಇಂಗ್ಲಿಷ್ ಭಾಷೆಗಳು ಕೇವಲ ಅವಶ್ಯಕತೆ, ಕನ್ನಡ ಜೀವನದ ಆದ್ಯತೆ. ಶತಶತಮಾನಗಳ ಇತಿಹಾಸ ಹೊಂದಿರುವ ನಮ್ಮ ಭಾಷೆಯ ಅಳಿವು ಎಂದಿಗೂ ಸಾಧ್ಯವಿಲ್ಲ. ಏಕೆಂದರೆ ಇಲ್ಲಿರುವ ಸಾಹಿತ್ಯ ಪ್ರಕಾರ ಮತ್ತು ಕೃತಿಗಳು ಮತ್ಯಾವ ಭಾಷೆಯಲ್ಲೂ ದೊರೆಯದು ಎಂದರು.
ವಿದ್ಯಾರ್ಥಿ ಯುವರಾಜ ಚೋಪಡೆಕರ ಸ್ವಾಗತಿಸಿದರು. ಸಂಗೀತಾ ಗೌಡ ನಿರೂಪಿಸಿದರು. ಮನೀಷಾ ಗೌಡ ವಂದಿಸಿದರು. ಸ್ವಪ್ನ ನಾಯ್ಕ ಸಂಗಡಿಗರು ಕನ್ನಡ ಗೀತೆ ಹಾಡಿದರು. ಸಚಿನ್ ನಾಯಕ, ಭಾರ್ಗವ ಗೌಡ, ಸಂಗೀತಾ ಗೌಡ ಜಾಗೃತಿ ಗೌಡ ಮತ್ತಿತರು ಇದ್ದರು.