ಕುಮಟ : ಸಾಮಾಜಿಕ ಹೋರಾಟಗಾರ ಸೂರಜ ನಾಯ್ಕ ಸೋನಿ ಅವರು ಜನರಿಗಾಗಿ, ಜನರಿಗೋಸ್ಕರ ಹಮ್ಮಿಕೊಂಡ ಹೊನ್ನಾವರದಿಂದ ಕುಮಟಾವರೆಗಿನ ಜನಪರ ಪಾದಯಾತ್ರೆ ಸಾವಿರಾರು ಜನರ ಪಾಲ್ಗೊಳ್ಳುವಿಕೆಯಲ್ಲಿ ಅಭೂತಪೂರ್ವ ಯಶಸ್ಸು ಕಾಣುವ ಮೂಲಕ ಹೊಸ ದಾಖಲೆ ಬರೆಯಿತು.
ಹೋರಾಟದ ಮೂಲಕವೇ ಕುಮಟಾ- ಹೊನ್ನಾವರ ಕ್ಷೇತ್ರದಲ್ಲಿ ಜನರ ವಿಶ್ವಾಸ ಗಳಿಸಿದ ಸೂರಜ ನಾಯ್ಕ ಸೋನಿ ಅವರು ಏನೇ ಹೋರಾಟ ಮಾಡಿದರು ಅದು ಯಶಸ್ಸು ಕಾಣುವುದರಲ್ಲಿ ಎರಡು ಮಾತಿಲ್ಲ. ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ, ಅರಣ್ಯ ಅತಿಕ್ರಮಣದಾರರಿಗೆ ಪಟ್ಟಾ, ಮೀನುಗಾರರಿಗೆ ಕೋಲ್ಡ್ ಸ್ಟೋರೆಜ್ ಸೇರಿದಂತೆ ವಿವಿಧ ಸೌಲಭ್ಯ, ರೈತರ ಬೆಳೆ ಹಾನಿ ಮಾಡುವ ಕಾಡು ಪ್ರಾಣಿಗಳ ನಿಯಂತ್ರಣ, ಪರೇಶ ಮೇಸ್ತಾ ಪ್ರಕರಣದ ರಾಜಕೀಯ ಷಡ್ಯಂತ್ರ ಬಯಲು ಮಾಡಬೇಕು ಸೇರಿದಂತೆ ವಿವಿಧ ಪ್ರಮುಖ ಬೇಡಿಕೆಗಳ ಈಡೇರಿಕೆಗಾಗಿ ಸೂರಜ ನಾಯ್ಕ ಸೋನಿ ಗೆಳೆಯರ ಬಳಗವು ಜನಪರ ಪಾದಯಾತ್ರೆಯನ್ನು ಹಮ್ಮಿಕೊಂಡಿತ್ತು. ಹೊಸ ಆಲೋಚನೆ, ಚಿಂತನೆಯೊಂದಿಗೆ ರೂಪಗೊಂಡ ಜನಪರ ಪಾದಯಾತ್ರೆಯನ್ನು ವಿಫಲಗೊಳಿಸಲು ಕೆಲ ಕಾಣದ ಕೈಗಳು ಸಾಕಷ್ಟು ಷಡ್ಯಂತ್ರ ರೂಪಿಸಿದ್ದವು. ಇಡೀ ಜಿಲ್ಲೆಯಲ್ಲಿ ಯಾವ ಶಾಸಕರು, ಸಚಿವರು ಕೈಗೊಳ್ಳದಂತಹ ಪಾದಯಾತ್ರೆಯನ್ನು ಸೂರಜ ನಾಯ್ಕ ಸೋನಿ ಅವರ ಗೆಳೆಯರ ಬಳಗದ ಸಹಕಾರದಲ್ಲಿ ಹಮ್ಮಿಕೊಂಡಿರುವ ವಿಚಾರ ಇಡೀ ಕ್ಷೇತ್ರವಲ್ಲದೆ ಜಿಲ್ಲೆಯಲ್ಲಿಯೇ ಸಂಚಲನ ಮೂಡಿಸಿತ್ತು.
ಒಂದೆರಡು ಕಿ.ಮೀ. ಪಾದಯಾತ್ರೆಯನ್ನು ಕೆಲ ರಾಜಕಾರಣಿಗಳು ಹಮ್ಮಿಕೊಳ್ಳುವುವುದು ಸಹಜ. ಆದರೆ ಸೂರಜ ನಾಯ್ಕ ಸೋನಿ ಹಮ್ಮಿಕೊಂಡ ಪಾದಯಾತ್ರೆ ಸರಿಸುಮಾರು 20 ಕಿಮೀ ಆಗಿದೆ. ಬೆಳಗ್ಗೆ ಶುರುವಾರ ಪಾದಯಾತ್ರೆ ಸಂಜೆ ಕೊನೆಗೊಂಡಿತು. ಇಂಥ ಸಾಹಸಮಯ ಪಾದ ಯಾತ್ರೆಯನ್ನು ವಿಫಲಗೊಳಿಸಲು ಕೆಲ ಕಾಣದ ಕೈಗಳು ಬಹುತೇಕ ಗ್ರಾಪಂಗಳ ಪ್ರಮುಖರಿಗೆ ಕರೆ ಮಾಡಿ, ಈ ಪಾದ ಯಾತ್ರೆಯಲ್ಲಿ ಪಾಲ್ಗೊಳ್ಳದಂತೆ ಸೂಚಿಸಲಾಗಿತ್ತು ಎನ್ನಲಾಗುತ್ತಿದೆ. ಆದರೆ ಸೂರಜ ಸೋನಿ ಮಾಡುವ ಹೋರಾಟ ಜನಪರವಾಗಿರುತ್ತದೆ ಎಂಬುದು ಜನರಿಗೆ ತಿಳಿದ ಸತ್ಯ. ಹಾಗಾಗಿ ಹೊನ್ನಾವರದಲ್ಲಿ ಆರಂಭವಾದ ಪಾದಯಾತ್ರೆಯಲ್ಲಿಯೇ ಸಾವಿರಕ್ಕೂ ಅಧಿಕ ಜನರು ಪಾಲ್ಗೊಳ್ಳುವ ಮೂಲಕ ಪಾದ ಯಾತ್ರೆಗೆ ಅಭೂತಪೂರ್ವ ಚಾಲನೆ ದೊರೆಯಿತು.
ಕರ್ಕಿ, ಹಳದಿಪುರ, ಹೊಳೆಗದ್ದೆ ಮೂಲಕ ಸಾಗುತ್ತಿದ್ದಂತೆ ಪಾದಯಾತ್ರೆಗೆ ಜನ ಬೆಂಬಲ ವ್ಯಾಪಕವಾಗಿ ದೊರೆಯುತ್ತಲೆ ಸಾಗಿತು. ಹೆದ್ದಾರಿಯಲ್ಲಿ ದೊರೆಯುವ ಪ್ರತಿ ಗ್ರಾಮಗಳಿಂದಲೂ ಮನವಿಗಳನ್ನು ಸಲ್ಲಿಸಲಾಯಿತು. ಸೋನಿ ಅವರು ನಿರೀಕ್ಷೆ ಮಾಡಿದ್ದಕ್ಕಿಂತಲೂ ಮನವಿಗಳ ಸುರಿಮಳೆಯೇ ಆಗಿರುವುದು ಜನರು, ಸೋನಿ ಅವರ ಬಗ್ಗೆ ಇಟ್ಟ ವಿಶ್ವಾಸ ಎಷ್ಟಿದೆ ಎಂಬುದಕ್ಕೆ ಇದೊಂದು ಸಾಕ್ಷಿಯಾಯಿತು. ಬಹುತೇಕ ಗ್ರಾಮಗಳ, ಸಮಾಜಗಳ ಮುಖಂಡರು ತಮ್ಮ ಊರ ಮೂಲಕ ಹಾದುಹೋಗುವ ಪಾದಯಾತ್ರೆಯ ರೂವಾರಿಯಾದ ಸೂರಜ ನಾಯ್ಕರಿಗೆ ಹೂವಿನ ಮಾಲೆ ಹಾಕುವ ಮೂಲಕ ಪಾದಯಾತ್ರೆಯ ಯಶಸ್ಸಿಗೆ ಹಾರೈಸಿದ ಪರಿ, ಸೋನಿ ಅವರನ್ನು ಭಾವುಕರನ್ನಾಗಿಸಿತು. ಜನರ ಅಪಾರ ಪ್ರೀತಿ, ಸ್ನೇಹ, ಆತ್ಮೀಯತೆಗೆ ಅವರು ತಲೆ ಬಾಗುವಂತಾಯಿತು. ಕುಮಟಾ ಪಟ್ಟಣಕ್ಕೆ ಸಮೀಪಿಸುತ್ತಿದ್ದಂತೆ ಸಾಗರೋಪಾದಿಯಲ್ಲಿ ಜನರು ಹರಿದುಬಂದು ಗಿಬ್ ಸರ್ಕಲ್‌ನಲ್ಲಿ ಜಮಾಯಿಸುವ ಮೂಲಕ ಸೋನಿ ಅವರಿಗೆ ಅಭಿನಂದಿಸಿದರು. ಸೋನಿ ಅವರನ್ನು ಗಿಬ್ ಸರ್ಕಲ್ ಬಳಿ ಎತ್ತುವ ಮೂಲಕ ಯುವಕರು, ಜನಪರ ಹೋರಾಟಗಾರನಿಗೆ ತಮ್ಮ ಪ್ರೀತಿ, ವಿಶ್ವಾಸವನ್ನು ತೋರ್ಪಡಿಸಿದ ಪರಿ ಗಮನ ಸೆಳೆಯಿತು. ಪಟಾಕಿ ಸಿಡಿಸಿ ಸಂಭ್ರಮಿಸಿದ ಯುವಕರು ಸೋನಿಪರ ಜೈಕಾರ ಕೂಗಿದರು.
ಆಸ್ಪತ್ರೆಗೆ ಅಡಿಗಲ್ಲು ಹಾಕಬೇಕು…
ಪಾದಯಾತ್ರೆಯ ಬಳಿಕ ಸೂರಜ ನಾಯ್ಕ ಸೋನಿ ಅವರು ತೆರೆದ ವಾಹನದಲ್ಲಿ ಪಾದಯಾತ್ರೆ ಯಶಸ್ವಿಗೊಳಿಸಿದ ಜನರ ಪ್ರೀತಿ, ವಿಶ್ವಾಸಕ್ಕೆ ಧನ್ಯವಾದ ಸಲ್ಲಿಸಿದರು. ತನ್ನ ಪಾದಯಾತ್ರೆಯ ಪ್ರಮುಖ ಬೇಡಿಕೆಗಳ ಬಗ್ಗೆ ಪ್ರಸ್ತಾಪಿಸಿದ ಸೋನಿ, ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಗೆ ಈ ವರ್ಷದ ಕೊನೆಯಲ್ಲಿ ಅಡಿಗಲ್ಲು ಹಾಕಬೇಕು. ಇಲ್ಲವಾದರೆ ಹಳ್ಳಿ ಹಳ್ಳಿಗಳಿಂದ ಪಾದ ಯಾತ್ರೆ ಹಮ್ಮಿಕೊಳ್ಳುವ ಎಚ್ಚರಿಕೆ ನೀಡಿದರು. ಪರೇಶ ಮೇಸ್ತಾನ ಪ್ರಕರಣದಲ್ಲಾದ ಅನ್ಯಾಯದ ಬಗ್ಗೆ ಖಂಡಿಸಿದ ಸೋನಿ, ಈಗ ಮತ್ತೆ ನಾಟಕವಾಡಲು ಮರು ತನಿಖೆಯ ಒತ್ತಾಯ ಮಾಡುತ್ತಿದ್ದಾರೆ. ಇದು ಮುಂದಿನ ಎಂಎಲ್‌ಎ ಚುನಾವಣೆಯ ಗಿಮಿಕ್ ಎಂದು ಕಿಡಿಕಾರಿದರು.
ಅರಣ್ಯ ಇಲಾಖೆಯ ಬಗ್ಗೆಯೂ ವಾಗ್ದಾಳಿ ಮಾಡಿದ ಸೋನಿ ಅವರು, ಅರಣ್ಯ ನಾಶವಾಗಲು ಅಧಿಕಾರಿಗಳೆ ಕಾರಣ. ಕಾಡು ಪ್ರಾಣಿಗಳಿಂದ ರೈತರ ಬೆಳೆ ನಾಶವಾಗುತ್ತದೆ ಎಂದರೆ ಇಲಾಖೆ ಬೆಳೆಸುತ್ತಿರುವ ಅಕೇಶಿಯಾ ಪ್ಲಾಂಟೇಷನ್ ಮುಖ್ಯ ಕಾರಣ. ಹಣ್ಣಿನ ಮರಗಳನ್ನು ಕಾಡಿನಲ್ಲಿ ಬೆಳೆಸಿದ್ದರೆ ಕಾಡು ಪ್ರಾಣಿಗಳು ನಾಡಿಗೆ ಬರುವ ಪ್ರಮಯ ಇರಲಿಲ್ಲ. ಮರ ಕಡಿದು ಮಾರಾಟ ಮಾಡಲು ಅನುಕೂಲವಾಗುವಂತಹ ಅಕೇಶಿಯಾ, ಗಾಳಿ, ಸಾಬೂನ್ ಮರಗಳನ್ನೆ ಬೆಳೆಸುತ್ತಿದ್ದಾರೆ. ಅವರಿಗೆ ರೈತರ ಬಗ್ಗೆ ಕಾಳಜಿ ಇಲ್ಲ. ಈ ಕ್ಷೇತ್ರದ ಮೀನುಗಾರರ ಅಭಿವೃದ್ಧಿಗೆ ಸರ್ಕಾರ ಸೂಕ್ತ ಕ್ರಮ ವಹಿಸಿಲ್ಲ. ಕೋಲ್ಡ್ ಸ್ಟೋರೆಜ್ ನಿರ್ಮಿಸಿಲ್ಲ. ವಿವಿಧ ಸೌಲಭ್ಯಗಳನ್ನು ಮೀನುಗಾರರಿಗೆ ನೀಡಿಲ್ಲ. ಇಲ್ಲಿನ ಶಾಸಕರ ಕಮೀಷನ್ ಕಾಮಗಾರಿ, ಶೇ.75, ಶೇ.25ರ ಕಾಮಗಾರಿ ರಾಜಕಾರಣದಿಂದ ಕ್ಷೇತ್ರದ ಅಭಿವೃದ್ಧಿ ಕುಂಠಿತವಾಗಿದೆ ಎಂದು ಆರೋಪಿಸಿದ ಸೋನಿ, ಐಗಳಕುರ್ವೆ, ಬೊಗ್ರಿಬೈಲ್ ಮತ್ತು ಗಂಗಾವಳಿ ಸೇತುವೆ ನಿರ್ಮಾಣವಾಗಿ ಎರಡು ವರ್ಷ ಕಳೆದರೂ ಸಂಪರ್ಕ ರಸ್ತೆ ನಿರ್ಮಿಸಿಲ್ಲ. ಎಮ್ಮೆ ತಕ್ಕೊಂಡವರಿಗೆ ದಾಬಾ ತರಲು ಹಣವಿಲ್ಲದಂತಾದ ದುಃಸ್ಥಿತಿಯ ಬಗ್ಗೆಯೂ ಸರ್ಕಾರವನ್ನು ಟೀಕಿಸಿದರು.
ಬಳಿಕ ಸ್ಥಳಕ್ಕಾಗಮಿಸಿದ ತಹಸೀಲ್ದಾರ್ ವಿವೇಕ ಶೇಣ್ವಿ ಅವರಿಗೆ ಮನವಿ ಸಲ್ಲಿಸಲಾಯಿತು.
ಈ ಪಾದಯಾತ್ರೆಯಲ್ಲಿ ಜೆಡಿಎಸ್ ತಾಲೂಕು ಅಧ್ಯಕ್ಷ ಸಿ ಜಿ ಹೆಗಡೆ, ಪ್ರಮುಖರಾದ ಗಣಪಯ್ಯ ಗೌಡ, ಜಿ ಕೆ ಪಟಗಾರ, ನಾಮಧಾರಿ ಸಮಾಜದ ಪ್ರಮುಖರಾದ ಮಂಜುನಾಥ ನಾಯ್ಕ ಕೋಡ್ಕಣಿ, ತುಕಾರಾಮ ನಾಯ್ಕ ಕರ್ಕಿ, ಸುಬ್ರಾಯ ನಾಯ್ಕ, ಗಜು ನಾಯ್ಕ ಅಳ್ವೆಕೋಡಿ, ಜಿಪಂ ನಿಕಟಪೂರ್ವ ಸದಸ್ಯೆ ವೀಣಾ ಸೂರಜ ಸೋನಿ, ಕಾಂಗ್ರೆಸ್ ಮುಖಂಡ ಭಾಸ್ಕರ ಪಟಗಾರ, ಸೋನಿ ಗೆಳೆಯರ ಬಳಗದ ಸಂಪತಕುಮಾರ, ಅಣ್ಣಪ್ಪ ನಾಯ್ಕ, ಇತರರು ಪಾಲ್ಗೊಂಡಿದ್ದರು. ಪಾದಯಾತ್ರೆಯೂದ್ದಕೂ ಸೂರಜ ಸೋನಿ ಗೆಳೆಯರ ಬಳಗವು, ನೀರು, ಜ್ಯೂಸ್, ಉಪಾಹಾರ ಸೇರಿದಂತೆ ಊಟದ ವ್ಯವಸ್ಥೆಯನ್ನು ಅಚ್ಚುಕಟ್ಟಾಗಿ ಸಂಘಟಿಸುವ ಮೂಲಕ ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು.