ಶಿರಸಿ: ಗಂಧದಗುಡಿ ಡಾಕ್ಯುಮೆಂಟರಿ ವೀಕ್ಷಣೆಯ ನಡುವೆಯೇ ಅಪ್ಪು ಅಭಿಮಾನಿಗಳು ಮಾನವೀಯ ಕಾರ್ಯವೊಂದನ್ನ ಮಾಡಿ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ನಟರಾಜ ಚಿತ್ರಮಂದಿರದ ದಿನಗೂಲಿ ನೌಕರನಾಗಿರುವ ಪರಶುರಾಮ ಛಲವಾದಿ ಎನ್ನುವವರ ಗರ್ಭಿಣಿ ಪತ್ನಿ ವನಜಾ ಅವರ ಹೊಟ್ಟೆಯಲ್ಲೇ ಮಗು ಸತ್ತು ಸೋಂಕಾಗಿತ್ತು. ಮೃತ ಮಗುವನ್ನು ಹೊರ ತೆಗೆದು ಚಿಕಿತ್ಸೆ ನೀಡುವಾಗ ಚಿಕಿತ್ಸೆ ಫಲಕಾರಿಯಾಗದೆ ಗರ್ಭಿಣಿ ಸಾವನ್ನಪ್ಪಿದ್ದರು.
ಗರ್ಭಿಣಿಯ ಮೃತದೇಹ ಕೊಂಡೊಯ್ಯುವ ಮುನ್ನ ಶಿರಸಿಯ ಟಿಎಸ್‌ಎಸ್ ಆಸ್ಪತ್ರೆಯವರು 24,000 ರೂ. ಚಾರ್ಜ್ ಮಾಡಿದ್ದರು. ಪತ್ನಿಯ ಮೃತದೇಹ ಬಿಡಿಸಿಕೊಳ್ಳಲು ಪರಶುರಾಮ ಹಣವಿಲ್ಲದೇ ಪರದಾಡುತ್ತಿದ್ದರು.
ತನ್ನ ನೋವನ್ನು ಪರಶುರಾಮ್ ಪುನೀತ್ ರಾಜ್‌ಕುಮಾರ್ ಅಭಿಮಾನಿಗಳ ಜತೆ ತೋಡಿಕೊಂಡಿದ್ದು, ವಿಷಯ ತಿಳಿದು ಪುನೀತ್ ರಾಜ್‌ಕುಮಾರ್ ಅಭಿಮಾನಿಗಳ ಬಳಗದಲ್ಲೇ 100ರೂ.- 200ರೂ.ನಂತೆ ಹಣ ಸಂಗ್ರಹಿಸಿದ್ದಾರೆ. ಹಣವನ್ನು ಒಟ್ಟು ಸೇರಿಸಿ ಟಿಎಸ್‌ಎಸ್ ಆಸ್ಪತ್ರೆಗೆ ತೆರಳಿ ಆಸ್ಪತ್ರೆಯ ಚಿಕಿತ್ಸಾ ವೆಚ್ಚವನ್ನ ಪುನೀತ್ ಅಭಿಮಾನಿ ಬಳಗೇ ಪಾವತಿಸಿದ್ದಾರೆ.
ಅಪ್ಪು ಅಭಿಮಾನಿ ಬಳಗದ ವಿನಂತಿ ಮೇರೆಗೆ ವೆಚ್ಚದಲ್ಲೂ ಕೊಂಚ ಕಡಿತಗೊಳಿಸಿರುವ ಆಸ್ಪತ್ರೆಯವರು, ಮೃತದೇಹ ಬಿಟ್ಟುಕೊಟ್ಟಿದ್ದಾರೆ. ಬಳಿಕ ಪರಶುರಾಮ ಅವರ ಮನೆಯವರೆಗೂ ಅಪ್ಪು ಅಭಿಮಾನಿಗಳು ಮೃತದೇಹ ತಂದುಕೊಟ್ಟಿದ್ದು, ಅಪ್ಪುವಿನ ದಾರಿಯಲ್ಲೇ ನಡೆದ ಶಿರಸಿಯ ಅಪ್ಪು ಅಭಿಮಾನಿಗಳ ನಡೆಗೆ ಮೆಚ್ಚುಗೆ ವ್ಯಕ್ತವಾಗಿದೆ.