ಕುಮಟಾ: ತಾಲೂಕಿನ ಐತಿಹಾಸಿಕ ಮಿರ್ಜಾನ್ ಕೋಟೆ, ಬಾಡದ ಪ್ರಸಿದ್ಧ ಶ್ರೀಕಾಂಚಿಕಾ ಪರಮೇಶ್ವರಿ ದೇವಸ್ಥಾನ, ಹೆಗಡೆಯ ಹೆಣ್ಣು ಮಕ್ಕಳ ಶಾಲೆ ಸೇರಿದಂತೆ ವಿವಿಧ ಶಾಲಾ ಕಾಲೇಜ್‌ಗಳಲ್ಲಿ ತಾಲೂಕು ಆಡಳಿತದಿಂದ ಕೋಟಿ ಕಂಠ ಗಾಯನ ಕಾರ್ಯಕ್ರಮ ಸಂಪನ್ನಗೊಂಡಿತು.
ತಾಲೂಕ ಆಡಳಿತ, ತಾ.ಪಂ. ಶಿಕ್ಷಣ ಇಲಾಖೆ, ಗ್ರಾ.ಪಂ ಮಿರ್ಜಾನ ಹಾಗೂ ವಿವಿಧ ಸಂಘ ಸಂಸ್ಥೆಗಳ ಸಂಯುಕ್ತ ಆಶ್ರಯದಲ್ಲಿ ಮಿರ್ಜಾನ ಕೋಟೆಯಲ್ಲಿ 67ನೇ ರಾಜ್ಯೋತ್ಸವದ ಅಂಗವಾಗಿ ಹಮ್ಮಿಕೊಂಡಿದ್ದ ತಾಲೂಕಾ ಮಟ್ಟದ ಕೋಟಿ ಕಂಠ ಗಾಯನ ಎಲ್ಲರ ಗಮನ ಸೆಳೆಯುವಲ್ಲಿ ಯಶಸ್ವಿಯಾಯಿತು. ಜನತಾ ವಿದ್ಯಾಲಯ ಮಿರ್ಜಾನ ಕೋಡ್ಕಣಿ ಪ್ರೌಢಶಾಲಾ ವಿದ್ಯಾರ್ಥಿನಿಯರು ಉದಯವಾಗಲಿ ನಮ್ಮ ಚಲುವ ಕನ್ನಡ ನಾಡು, ಬಾರಿಸು ಕನ್ನಡ ಡಿಂಡಿಮವಾ, ಹಚ್ಚೇವು ಕನ್ನಡ ದೀಪ, ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು ಸೇರಿದಂತೆ 5 ಹಾಡನ್ನು ಹಾಡಿದರೆ ಉರ್ದು ಪ್ರೌಢಶಾಲಾ ವಿದ್ಯಾರ್ಥಿನಿಯರು ನಾಡಗೀತೆಯನ್ನು ಹಾಡುವ ಮೂಲಕ ಮಿರ್ಜಾನ ಕೋಟೆಯಲ್ಲಿ ಕೋಟಿ ಕಂಠ ಗಾಯನ ಕಂಪನ್ನು ಚಲ್ಲಿದರು.
ವಿಶೇಷ ಅತಿಥಿಯಾಗಿ ಆಗಮಿಸಿದ ಶಾಸಕ ದಿನಕರ ಶೆಟ್ಟಿ ಅವರು ಚಲನ ಚಿತ್ರದಲ್ಲಿ ಡಾ. ರಾಜಕುಮಾರ ಹಾಡಿದ ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕುವೆಂಬ ಹಾಡು ಜನತಾ ವಿದ್ಯಾಲಯದ ವಿದ್ಯಾರ್ಥಿನಿಯರು ಹಾಡುತ್ತಿದ್ದಂತೆ ಮನಸೋತ ಶಾಸಕರು ಈ ಹಾಡು ಪೂರ್ತಿಯಾಗುವವರೆಗೂ ಚಪ್ಪಾಳೆ ತಟ್ಟುತ್ತ ಆಸ್ವಾದಿಸಿದರು. ವೇದಿಕೆಯಲ್ಲಿದ್ದ ಅಧಿಕಾರಿಗಳು ಸಾಥ ನೀಡಿದರು. ವಿದ್ಯಾರ್ಥಿನಿಯರು ಸ್ವಲ್ಪವೂ ತಪ್ಪದೇ ಹಾಡಿದ್ದನ್ನು ಶ್ಲಾಘಿಸಿ ಇವರನ್ನು ತರಬೇತುಗೊಳಿಸಿದ ಶಿಕ್ಷಕರ ಶ್ರಮ ಅದನ್ನು ಸರಿಯಾಗಿ ಕರಗತ ಮಾಡಿಕೊಂಡ ವಿದ್ಯಾರ್ಥಿಗಳ ವಿಶೇಷ ಆಸಕ್ತಿ ಹಾಗೂ ಉರ್ದು ಶಾಲಾ ವಿದ್ಯಾರ್ಥಿಗಳು ಹಾಡಿದ ನಾಡಗೀತೆಗೆ ಮೆಚ್ಚುಗೆ ವ್ಯಕ್ತಪಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಶಾಸಕ ದಿನಕರ ಶೆಟ್ಟಿ , ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವರಾದ ಸುನಿಲಕುಮಾರ ಕಳೆದ ಬಾರಿ ಜಾರಿಗೆ ತಂದ ಮಾತಾಡ ಮಾತಾಡ ಕನ್ನಡ ಎನ್ನುವಂತಹ ಕಾರ್ಯಕ್ರಮ ರಾಜ್ಯಾದ್ಯಂತ ಯಶಸ್ವಿ ಕಂಡಿತು. ಕನ್ನಡ ರಾಜ್ಯೋತ್ಸವ ನವಂಬರ 1 ರಂದು ಅದ್ದೂರಿಯಾಗಿ ಆಚರಿಸಲು ನಿರ್ಧರಿಸಿದ್ದು ಅದಕ್ಕೂ ಮುಂಚಿತವಾಗಿ ಕೋಟಿ ಕಂಟ ಗಾಯನವನ್ನು ರಾಜ್ಯಾದ್ಯಂತ ಎಲ್ಲ ಶಾಲಾ ಕಾಲೇಜುಗಳಲ್ಲಿ ಆಚರಿಸುವ ಮೂಲಕ ವಿಶೇಷ ಮೆರು ತಂದಿದ್ದಾರೆ. ಈಗಾಗಲೇ 56 ದೇಶಗಳಿಂದ 26 ರಾಜ್ಯಗಳಿಂದ ಕೋಟಿ ಕಂಠ ಗಾಯನಕ್ಕೆ ನೊಂದಾವಣಿಯಾಗಿದ್ದು ಜಗತ್ತಿನಾದ್ಯಂತ ನೆಲೆಸಿದ ನಮ್ಮ ಕನ್ನಡಿಗರು ಕನ್ನಡ ಭಾಷೆ ಮರೆತ್ತಿಲ್ಲವೆಂದು ಸಂತಷ ವ್ಯಕ್ತಪಡಿಸಿದರು.
ಉಪವಿಭಾಗಧಿಕಾರಿ ರಾಘವೇಂದ್ರ ಜಗಲಾಸರ್, ಕಾರ್ಯನಿರತ ಪತ್ರಕರ್ತ ಸಂಘದ ಅಧ್ಯಕ್ಷ ಪ್ರವೀಣ ಹೆಗಡೆ ಮಾತನಾಡಿದರು. ಪ್ರೌಢಶಾಲಾ ಮುಖ್ಯಾಧ್ಯಾಪಕ ವಿ.ಪಿ.ಶಾನಭಾಗ ಪ್ರತಿಜ್ಞಾ ವಿಧಿ ಬೋಧಿಸಿದರು. ತಹಶೀಲ್ದಾರ ವಿವೇಕ ಶೆಣೈ, ತಾ.ಪಂ ಕಾರ್ಯನಿರ್ವಹಣಾಧಿಕಾರಿ ನಾಗರತ್ನಾ ನಾಯಕ, ಕ.ಸ.ಪಾ ಅಧ್ಯಕ್ಷ ಸುಬ್ಬಯ್ಯ ನಾಯ್ಕ, ಗ್ರಾ.ಪಂ. ಅಧ್ಯಕ್ಷರಾದ ಪರಮೇಶ್ವರ ಪಟಗಾರ, ರಾಜೇಶ ಪಟಗಾರ, ಉಪಾಧ್ಯಕ್ಷರಾದ ಸೀತಾ ಭಟ್ಟ, ದೇವಿಮುಕ್ರಿ ಇತರರು ಉಪಸ್ಥಿತರಿದ್ದರು. ನೋಡೆಲ್ ಅಧಿಕಾರಿ ಗಣೇಶ ಪಟಗಾರ ಸ್ವಾಗತಿಸಿರು. ಯೋಗೇಶ ಕೋಡ್ಕಣಿ ನಿರೂಪಿಸಿದರು. ಪಿಡಿಓ ಅಮೃತಾ ಭಟ್ ವಂದಿಸಿದರು. ವಿವಿಧ ಶಾಲೆಗಳಿಂದ 500ಕ್ಕೂ ಹೆಚ್ಚು ವಿದ್ಯಾರ್ಥಿಗಳು ಮುಖ್ಯಾಧ್ಯಾಪಕರು ಸಹ ಶಿಕ್ಷಕರು ಪಾಲ್ಗೊಂಡಿದ್ದರು.