ಬೆಂಗಳೂರು: ಮದರಸಗಳನ್ನು ಆಧುನಿಕ ಶಿಕ್ಷಣದತ್ತ ತರಲು ಉತ್ತರಪ್ರದೇಶ ಸರ್ಕಾರ ಕೈಗೊಳ್ಳುತ್ತಿರುವ ಕ್ರಮಗಳ ಬಗ್ಗೆ ಎಲ್ಲರಿಗೂ ತಿಳಿದೇ ಇದೆ. ಅದೇ ರೀತಿ ಕರ್ನಾಟಕ ಕೂಡ ತನ್ನ ನೆಲದಲ್ಲಿನ ಅರೇಬಿಕ್ ಶಾಲೆಗಳನ್ನು ಕಲಿಕೆಯ ಮುಖ್ಯವಾಹಿನಿಗೆ ಕರೆ ತರುವ ನಿಟ್ಟಿನಲ್ಲಿ ಪ್ರಯತ್ನ ಆರಂಭಿಸಿದೆ.
ಕರ್ನಾಟಕದಲ್ಲಿ ಕಾರ್ಯನಿರ್ವಹಿಸುತ್ತಿರುವ ಸುಮಾರು 200 ಅರೇಬಿಕ್ ಶಾಲೆಗಳ ಸ್ಥಿತಿಗತಿ ಹಾಗೂ ಕಾರ್ಯನಿರ್ವಹಣೆ ಕುರಿತು ಶೀಘ್ರ ವರದಿ ಸಲ್ಲಿಸಬೇಕು ಎಂದು ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಸೂಚಿಸಿದ್ದಾರೆ.
“ಅರೇಬಿಕ್ ಶಾಲೆಗಳು ನಿಯಮಗಳಿಗೆ ಬದ್ಧವಾಗಿಲ್ಲ. ಅಲ್ಲಿ ಭಾಷೆ ಮತ್ತು ವಿಜ್ಞಾನದ ಕಲಿಕೆಯೂ ಸಮರ್ಪಕ ರೀತಿಯಲ್ಲಿ ಇಲ್ಲ. ಈ ಬಗ್ಗೆ ಹಲವರು ಆತಂಕ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಸಮಗ್ರವಾಗಿ ಪರಿಶೀಲಿಸುವಂತೆ ಆಯುಕ್ತರಿಗೆ ಸೂಚಿಸಲಾಗಿದೆ’ ಎಂದು ಸಚಿವರು ಹೇಳಿದ್ದಾರೆ.
“ಕೆಲವು ಮದರಸಾಗಳು ಮಾತ್ರ ಶಾಲಾ ಇಲಾಖೆ ಸೂಚಿಸಿರುವ ಪಠ್ಯಕ್ರಮ ಅನುಸರಿಸುತ್ತಿವೆ. ಆದರೆ ಬಹುತೇಕ ಶಾಲೆಗಳು ಸೂಚನೆಗಳನ್ನು ಉಲ್ಲಂಘಿಸಿವೆ. ಸಮಗ್ರ ಪರಿಶೀಲನೆಯ ನಂತರ ಈ ಬಗ್ಗೆ ಸ್ಪಷ್ಟವಾಗುತ್ತದೆ. ಕರ್ನಾಟಕದಲ್ಲಿ 106 ಅನುದಾನಿತ ಹಾಗೂ 80 ಅನುದಾನರಹಿತ ಅರೇಬಿಕ್ ಶಾಲೆಗಳಿವೆ. ಈ ಶಾಲೆಗಳಲ್ಲಿ ಎಷ್ಟರಮಟ್ಟಿಗೆ ಇಲಾಖೆಯ ಸೂಚನೆಗಳನ್ನು ಅನುಷ್ಠಾನಕ್ಕೆ ತರಲಾಗಿದೆ ಎನ್ನುವುದನ್ನು ಸಮೀಕ್ಷೆಯ ವೇಳೆ ಪರಿಶೀಲಿಸಲಾಗುವುದು” ಎಂದಿದ್ದಾರೆ.
“ಅರೇಬಿಕ್ ಶಾಲೆಗಳಿಗೆ ಪ್ರತಿವರ್ಷ ಸುಮಾರು 27 ಸಾವಿರ ಮಕ್ಕಳು ದಾಖಲಾಗುತ್ತಾರೆ. ದಾಖಲೆಗಳಲ್ಲಿ ಕಾಣಿಸುವ ಈ ದಾಖಲಾತಿ ಸಂಖ್ಯೆಗೂ, ವಾಸ್ತವವಾಗಿ ಶಾಲೆಗಳಿಗೆ ಹಾಜರಾಗುವ ಮಕ್ಕಳ ಸಂಖ್ಯೆಗೂ ಭಾರೀ ವ್ಯತ್ಯಾಸವಿದೆ ಎಂಬ ಅನುಮಾನಗಳಿವೆ. ಶಿಕ್ಷಣವು ಮಕ್ಕಳ ಹಕ್ಕು. ಧರ್ಮದ ಕಾರಣಕ್ಕೆದಿಂದ ಮಗು ಉತ್ತಮ ಶಿಕ್ಷಣದಿಂದ ವಂಚಿತವಾಗಬಾರದು” ಎಂದಿದ್ದಾರೆ.