Slide
Slide
Slide
previous arrow
next arrow

ಸಾರ್ವಜನಿಕರ ಗಮನ ಸೆಳೆದ ಪಪ್ಪಾಯಿ ಹೊಂಡೆಯಾಟ

300x250 AD

ಕುಮಟಾ: ದೀಪಾವಳಿ ಹಬ್ಬದ ನಿಮಿತ್ತ ಪಟ್ಟಣದ ವಿವಿಧೆಡೆ ಕಂಡುಬಂದ ಪಪ್ಪಾಯಿ ಹೊಂಡೆಯಾಟ ಸಾರ್ವಜನಿಕರ ಗಮನ ಸೆಳೆಯಿತು.
ಕಳೆದ ನಾಲ್ಕು ದಿನಗಳ ಕಾಲ ಸಡಗರ, ಸಂಭ್ರಮದಿ ನಡೆದ ಬೆಳಕಿನ ಹಬ್ಬ ದೀಪಾವಳಿ ಸಂಪನ್ನ ಗೊಂಡಿದ್ದು, ಅಮವಾಸ್ಯ ದಿನದಂದು ಆರಂಭವಾದ ಹೊಂಡೆಯಾಟ ಹಬ್ಬದ ಕೊನೆಯ ದಿನವಾದ ಬಲಿ ಪಾಡ್ಯದಂದು ಕೊನೆಗೊಂಡಿತು. ಈ ಹೊಂಡೆಯಾಟವನ್ನು ಆಸಕ್ತಿಯಿಂದ ವೀಕ್ಷಿಸಿದ ಜನರು ಸಂತಸಪಟ್ಟರು. ದೀಪಾವಳಿಯ ಕೊನೆಯ 2 ದಿನಗಳು ಬಹುತೇಕ ಸಮಾಜದವರು ಸಾಂಪ್ರದಾಯಿಕ ಪಪ್ಪಾಯಿ ಹೊಂಡೆಯಾಟವಾಡುತ್ತಾರೆ.
ನಾಮಧಾರಿ, ಕೋಮಾರಪಂತ, ಹಾಲಕ್ಕಿ ಗೌಡ, ಮುಕ್ರಿ, ಜಿಎಸ್ಬಿ ಹಾಗೂ ಉಪ್ಪಾರ ಸಮುದಾಯದ ಯುವಕರು ಹೊಂಡೆಯಾಟದಲ್ಲಿ ನಿರತರಾಗಿರುವುದು ಕಂಡುಬಂತು. ದೇವರಹಕ್ಕಲದ ಶಾಂತಿಕಾ ಪರಮೇಶ್ವರಿ ದೇವಸ್ಥಾನದಿಂದ ಆರಂಭವಾಗುವ ಹೊಂಡೆಯಾಟ ಸುಭಾಸ ರಸ್ತೆ ಮಾರ್ಗವಾಗಿ ಪಿಕಪ್ ಬಸ್ಟ್ಯಾಂಡ್ ತಲುಪುತ್ತದೆ. ಅಲ್ಲಿ ಶಶಿಹಿತ್ತಲ-ಗುಂದಾ ಕಡೆಯಿಂದ ಬಂದ ಕೋಮಾರಪಂತ ಸಮುದಾಯದ ಯುವಕರು ಒಟ್ಟಿಗೆ ಸೇರಿಕೊಂಡು ಹೊಂಡೆಯಾಡುತ್ತಾರೆ. ಅಲ್ಲಿಂದ ರಥಬೀದಿ, ಮೂರುಕಟ್ಟೆ ಮಾರ್ಗವಾಗಿ ತೆರಳುವಾಗ ಹಾಲಕ್ಕಿ ಮತ್ತು ಮುಕ್ರಿ ಸಮಾಜದ ನಂತರ ಈ ಹೊಂಡೆಯಾಟ ಗಿಬ್ ಸರ್ಕಲ್ಲಿನ ಹುಲಿದೇವರ ಕಟ್ಟೆಯಲ್ಲಿ ಕೊನೆಗೊಳ್ಳುತ್ತದೆ.
ಕವಣೆಯಲ್ಲಿ ಪಪ್ಪಾಯಿಯನ್ನು ಇಟ್ಟು ಕೈಯಲ್ಲಿ ಕಂಬಳಿ ಸುತ್ತಿಕೊಂಡು ಕುಳಿತ ವ್ಯಕ್ತಿಗೆ ಹೊಡೆಯುವಾಗ ಆ ಹೊಡೆತವನ್ನು ಕುಳಿತ ವ್ಯಕ್ತಿಯು ತಪ್ಪಿಸಿಕೊಳ್ಳಬೇಕಾಗುತ್ತದೆ. ಒಮ್ಮೊಮ್ಮೆ ಈ ಹೊಡೆತದಿಂದ ಪೆಟ್ಟು ತಗಲುವುದು ಸಾಮಾನ್ಯವಾಗಿರುತ್ತದೆ. ಈ ಪಪ್ಪಾಯಿ ಕವಣೆಯಲ್ಲಿ ಸುತ್ತಿಕೊಂಡು ರಭಸದಿಂದ ಹೊಡೆಯುವಾಗ ಆ ಪಪ್ಪಾಯಿ ಸಿಡಿದು ಜನರಿಗೆ ತಗುಲಿದಾಗ ನೆರೆದ ಜನರು ಕೂಹು ಹೊಡೆಯುವುದು ಜನರನ್ನು ರಂಜಿಸುತ್ತದೆ. ಉಪ್ಪಿನಗಣಪತಿ, ದೇವರಹಕ್ಕಲ, ಚಿತ್ರಿಗಿ, ನೆಲ್ಲಿಕೇರಿ ಹಳೆ ಬಸ್ ನಿಲ್ದಾಣ, ಶಶಿಹಿತ್ತಲ-ಗುಂದಾ, ಬಸ್ತಿಪೇಟೆ, ಉಪ್ಪಾರಕೇರಿ, ಹಳಕಾರ ಸೇರಿದಂತೆ ಪಟ್ಟಣದ ವಿವಿಧ ಕಡೆಯ ಜನರು ಕೂಡ ಆಟದಲ್ಲಿ ತೊಡಗಿಕೊಳ್ಳುತ್ತಾರೆ.

ಕಳೆದ 1916ರಲ್ಲಿ ಕಲ್ಲಿನಿಂದ ಹೊಂಡೆಯಾಡುವ ಪದ್ಧತಿ ಇತ್ತು. ಕಲ್ಲಿನ ಹೊಡೆತಕ್ಕೆ ಕೆಲವರು ಪ್ರಾಣ ಕಳೆದುಕೊಳ್ಳುತ್ತಿದ್ದರಿಂದ ಅಂದಿನ ಬ್ರಿಟಿಷ್ ಸರ್ಕಾರ ಈ ಪದ್ಧತಿಯನ್ನು ನಿಷೇಧಿಸಿತ್ತು. ನಂತರ ತೆಂಗಿನಕಾಯಿಯಿಂದ ಹೊಂಡೆಯಾಟ ನಡೆಯುತ್ತಿತ್ತು. ಈಗ ಪಪ್ಪಾಯಿ ಬಳಸಿಕೊಂಡು ಹೊಂಡೆಯಾಡುವ ಪದ್ಧತಿ ಇಂದಿಗೂ ಪ್ರಚಲಿತದಲ್ಲಿದೆ. ಈ ಹೊಂಡೆಯಾಟವನ್ನು ನೋಡಲು ನೂರಾರು ಜನರು ಸೇರುತ್ತಾರೆ. ಆಟಗಾರರಿಗೆ ಚಪ್ಪಾಳೆ ತಟ್ಟಿ ಪ್ರೋತ್ಸಾಹಿಸುವುದರಿಂದ ಆಟಗಾರರು ಹುಮ್ಮಸ್ಸಿನಿಂದ ಉತ್ತಮ ಪ್ರದರ್ಶನ ನೀಡುತ್ತಿರುವುದು ಕಂಡುಬಂತು.

300x250 AD
Share This
300x250 AD
300x250 AD
300x250 AD
Back to top