ಭಟ್ಕಳ: ಪಟ್ಟಣದ ಶ್ರೀ ಗುರು ಸುಧೀಂದ್ರ ಕಾಲೇಜಿನಲ್ಲಿ 2022- 23ನೇ ಸಾಲಿಗೆ ಪ್ರವೇಶ ಪಡೆದ ವಿದ್ಯಾರ್ಥಿಗಳ ಪಾಲಕರ ಸಮಾಗಮ ಕಾರ್ಯಕ್ರಮ ನಡೆಯಿತು.
ಮನೋವೈದ್ಯ, ಲೇಖಕ ಡಾ.ವಿರೂಪಾಕ್ಷ ದೇವರಮನೆಯವರು ಕಾರ್ಯಕ್ರಮ ಉದ್ಘಾಟಿಸಿ, ಪಾಲಕರೊಂದಿಗೆ ಮಕ್ಕಳ ಸಂಬಂಧ ಅತೀ ಮುಖ್ಯವಾದುದು. ಪಾಲಕರು ತಮ್ಮ ಮಕ್ಕಳಿಗಾಗಿ ನಿತ್ಯ ಸಮಯ ಮೀಸಲಿರಿಸಬೇಕು ಹಾಗೂ ಕುಶಲೋಪರಿಯನ್ನು ವಿಚಾರಿಸಬೇಕು ಎಂದು ತಿಳಿಹೇಳಿದರು.
ಶ್ರೀ ಗುರು ವಿದ್ಯಾಧಿರಾಜ ದಿ ನ್ಯೂ ಇಂಗ್ಲೀಷ್ ಪಿಯು ಕಾಲೇಜಿನ ಪ್ರಾಂಶುಪಾಲ ಡಾ.ವೀರೇಂದ್ರ ವಿ.ಶ್ಯಾನಭಾಗ ಮಾತನಾಡಿ, ಮಕ್ಕಳ ಸರ್ವತೋಮುಖ ಅಭಿವೃದ್ಧಿಗೆ ಪಾಲಕರು ಒದಗಿಸಿಕೊಡುವ ಸ್ವಚ್ಛಂದ-ಸಂಸ್ಕಾರ ವಾತಾವರಣ ಅತೀ ಮುಖ್ಯ. ಇಂತಹ ವಾತಾವರಣ ನಿರ್ಮಿಸುವಂತಾಗಲಿ ಹಾಗೂ ವಿದ್ಯಾರ್ಥಿಗಳಿಗೆ ಯಶಸ್ಸು ದೊರಕಲಿ ಎಂದು ಹಾರೈಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಭಟ್ಕಳ ಎಜುಕೇಶನ್ ಟ್ರಸ್ಟ್ನ ಟ್ರಸ್ಟೀ ಮ್ಯಾನೇಜರ್ ರಾಜೇಶ್ ನಾಯಕ್, ವಿದ್ಯಾರ್ಥಿಗಳು ಪದವಿಯ ಮೂರು ವರ್ಷಗಳ ಅವಕಾಶವನ್ನು ಸೂಕ್ತವಾಗಿ ಉಪಯೋಗಿಸಿ, ಕೌಶಲ್ಯವನ್ನು ವೃದ್ಧಿಸಿಕೊಳ್ಳಬೇಕು ಎಂದು ಹೇಳಿದರು.
2021-22ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಸಾಧನೆಗೈದ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಹಾಗೂ ಅವರ ಪಾಲಕರನ್ನು ಪುರಸ್ಕರಿಸಲಾಯಿತು. ಹೊಸ ಕಂಪ್ಯೂಟರ ಆ್ಯಡ್-ಆನ್ ಸರ್ಟಿಫಿಕೇಟ್ ತರಬೇತಿಯನ್ನು ಅನಾವರಣಗೊಳಿಸಲಾಯಿತು. ಪ್ರಾಂಶುಪಾಲ ಶ್ರೀನಾಥ ಪೈ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿ ಕಾರ್ಯಕ್ರಮದ ಮಹತ್ವವನ್ನು ತಿಳಿಸಿದರು. ಮುಖ್ಯ ಅತಿಥಿಗಳನ್ನು ಬಿಬಿಎ-ಬಿಎ ವಿಭಾಗದ ಉಪಪ್ರಾಂಶುಪಾಲ ವಿಶ್ವನಾಥ ಭಟ್ಟ ಹಾಗೂ ಬಿಸಿಎ ವಿಭಾಗದ ಉಪಪ್ರಾಂಶುಪಾಲ ವಿಖ್ಯಾತ ಪ್ರಭು ಪರಿಚಯಿಸಿದರೆ, ಬಿ.ಕಾಂ ವಿಭಾಗದ ಉಪಪ್ರಾಂಶುಪಾಲ ಪಿ.ಎಸ್.ಹೆಬ್ಬಾರ್ ಕಾಲೇಜಿನ ವಿವಿಧ ಚಟುವಟಿಕೆಗಳ ಕುರಿತು ಮಾಹಿತಿ ನೀಡಿದರು. ಉಪನ್ಯಾಸಕ ಶಾಂತರಾಯ ಜಿ. ವಂದಿಸಿದರು. ವಿದ್ಯಾರ್ಥಿಗಳಾದ ಲಿಡಿಯಾ ಹಾಗೂ ತೇಜಸ್ವಿನಿ ಕಾರ್ಯಕ್ರಮ ನಿರೂಪಿಸಿದರು.