ಬೆಂಗಳೂರು: ದೀಪಾವಳಿ ಹಬ್ಬ ಮುಗಿದ ಬಳಿಕ ನವದೆಹಲಿಗೆ ತೆರಳಲಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ವರಿಷ್ಠರನ್ನು ಭೇಟಿ ಮಾಡಿ ಬಹು ನಿರೀಕ್ಷಿತ ಸಚಿವ ಸಂಪುಟ ವಿಸ್ತರಣೆಗೆ ಅನುಮತಿ ಪಡೆಯುವ ಸಾಧ್ಯತೆ ಇದೆ.
ಈ ಬಾರಿ ಸಚಿವ ಸಂಪುಟ ವಿಸ್ತರಣೆಯಾದರೆ ಇಬ್ಬರು ವಾಲ್ಮೀಕಿ, ಇಬ್ಬರು ಹಿಂದುಳಿದವರು ಹಾಗೂ ಒಕ್ಕಲಿಗ ಮತ್ತು ಲಿಂಗಾಯಿತ ಸಮುದಾಯದಿಂದ ಒಬ್ಬರಿಗೆ ಅವಕಾಶ ಸಿಗುವ ಸಂಭವವಿದೆ. ವಾಲ್ಮೀಕಿ ಸಮುದಾಯದಿಂದ ಮಾಜಿ ಸಚಿವರಾದ ರಮೇಶ್ ಜಾರಕಿಹೊಳಿ, ರಾಜುಗೌಡ ನಾಯಕ್, ಹಿಂದುಳಿದ ಸಮುದಾಯದಿಂದ ಕೆ.ಎಸ್.ಈಶ್ವರಪ್ಪ, ಪೂರ್ಣಿಮಾ ಶ್ರೀನಿವಾಸ್, ಒಕ್ಕಲಿಗ ಸಮುದಾಯ ದಿಂದ ವಿಧಾನಪರಿಷತ್ ಸದಸ್ಯ ಸಿ.ಪಿ.ಯೋಗೇಶ್ವರ್ ಹಾಗೂ ಲಿಂಗಾಯಿತ ಸಮುದಾಯದಿಂದ ಮುಖ್ಯಮಂತ್ರಿ ಗಳ ರಾಜಕೀಯ ಕಾರ್ಯದರ್ಶಿ ಎಂ.ಪಿ. ರೇಣುಕಾಚಾರ್ಯ ಅವರು ಸಂಪುಟಕ್ಕೆ ಸೇರ್ಪಡೆಯಾಗಲಿದ್ದಾರೆ ಎನ್ನಲಾಗುತ್ತಿದೆ.
ಕನ್ನಡ ರಾಜ್ಯೋತ್ಸವಕ್ಕೂ ಮುನ್ನ ಇಲ್ಲವೇ ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶದ ನಂತರ ಸಿಎಂ ದೆಹಲಿಗೆ ತೆರಳುವ ಸಾಧ್ಯತೆ ಇದೆ. ಒಂದುವೇಳೆ ಅಷ್ಟರೊಳಗೆ ವರಿಷ್ಠರಿಂದ ಹಸಿರು ನಿಶಾನೆ ಸಿಕ್ಕರೆ ಗುರುವಾರದ ನಂತರ ಯಾವುದೇ ಕ್ಷಣದಲ್ಲೂ ದೆಹಲಿ ವಿಮಾನ ಏರುವ ಸಾಧ್ಯತೆಯನ್ನು ತಳ್ಳಿ ಹಾಕುವಂತಿಲ್ಲ. ಸದ್ಯ ದೆಹಲಿ ವರಿಷ್ಠರು ಹಿಮಾಚಲ ಪ್ರದೇಶದ ವಿಧಾನಸಭೆ ಚುನಾವಣೆ ಪ್ರಚಾರ, ಕಾರ್ಯತಂತ್ರ ಹಾಗೂ ಅಭ್ಯರ್ಥಿಗಳ ಆಯ್ಕೆ ಸೇರಿದಂತೆ ಮತ್ತಿತರ ವಿಷಯಗಳಲ್ಲಿ ತೊಡಗಿಕೊಂಡಿದ್ದಾರೆ. ಇನ್ನು ದೀಪಾವಳಿ ಹಬ್ಬದ ನಂತರ ಬಹುನಿರೀಕ್ಷಿತ ಗುಜರಾತ್ ವಿಧಾನಸಭೆ ಚುನಾವಣೆಗೂ ದಿನಾಂಕ ಘೋಷಣೆಯಾಗಬಹುದು. ಕೇಂದ್ರ ಚುನಾವಣಾ ಆಯೋಗ ದಿನಾಂಕವನ್ನು ನಿಗದಿಪಡಿಸುವ ಸಾಧ್ಯತೆ ಇದೆ.
ಹೀಗಾಗಿ ಗುಜರಾತ್ ವಿಧಾನ ಸಭೆಗೂ ಚುನಾವಣೆ ನಿಗದಿಯಾದರೆ ಸಚಿವ ಸಂಪುಟ ವಿಸ್ತರಣೆ ಮತ್ತಷ್ಟು ವಿಳಂಬವಾಗುವ ಸಾಧ್ಯತೆಯನ್ನು ತಳ್ಳಿ ಹಾಕುವಂತಿಲ್ಲ. ಹೀಗಾಗಿ ವರಿಷ್ಠರಿಂದ ಹಸಿರು ನಿಶಾನೆ ಪಡೆಯುವ ತವಕದಲ್ಲಿ ಸಿಎಂ ಇದ್ದಾರೆ.
ವಿಸ್ತರಣೆ/ ಪುನಾರಚನೆಯೋ?: ಈ ಬಾರಿ ಸಂಪುಟ ವಿಸ್ತರಣೆಯೋ ಇಲ್ಲವೇ ಪುನಾರಚನೆಯೋ ಎಂಬ ಗುಟ್ಟನ್ನು ಸಿಎಂ ಇಲ್ಲವೇ ಪಕ್ಷದ ಯಾವುದೇ ನಾಯಕರು ಬಿಟ್ಟುಕೊಟ್ಟಿಲ್ಲ. ಸ್ವತಃ ವರಿಷ್ಠರ ತಲೆಯಲ್ಲಿ ಏನಿದೆ ಎಂಬುದು ಕೂಡ ಸ್ಥಳೀಯ ನಾಯಕರಿಗೂ ತಿಳಿದಿಲ್ಲ. ಕೆಲವು ಶಾಸಕರು ವಿಸ್ತರಣೆ ಬದಲಿಗೆ ಪುನಾರಚನೆ ಮಾಡುವುದೇ ಸೂಕ್ತ ಎಂದು ಸಿಎಂ ಹಾಗೂ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಬಳಿ ಮನವಿ ಮಾಡಿದ್ದಾರೆ. ಪದೇ ಪದೇ ಅಧಿಕಾರ ಅನುಭವಿಸಿರುವ ಕೆಲವರನ್ನು ಸಂಪುಟದಿಂದ ಕೋಕ್ ನೀಡಿ ಪಕ್ಷದ ಸಂಘಟನೆಗೆ ನಿಯೋಜನೆ ಮಾಡಬೇಕೆಂಬ ಬೇಡಿಕೆ ಇಟ್ಟಿದ್ದಾರೆ.
ಹಾಗೊಂದು ವೇಳೆ ದೆಹಲಿ ನಾಯಕರು ಪುನಾರಚನೆಯ ಏನಾದರೂ ಒಪ್ಪಿದರೆ ನಿಸ್ಸಂದೇಹವಾಗಿ ಅರ್ಧ ಡಜನ್‌ಗೂ ಅಧಿಕ ಶಾಸಕರ ತಲೆದಂಡವಾಗುವುದು ಖಚಿತ. ಹಿರಿಯ ಶಾಸಕರಾದ ಗೋವಿಂದ ಕಾರಜೋಳ, ಅಶೋಕ, ಸೋಮಣ್ಣ, ಕೋಟಾ ಶ್ರೀನಿವಾಸ ಪೂಜಾರಿ, ಅರಗ ಜ್ಞಾನೇಂದ್ರ, ಪ್ರಭು ಚವ್ಹಾಣ್, ಶಶಿಕಲಾ ಜೊಲ್ಲೆ ಸೇರಿದಂತೆ ಮತ್ತಿತರ ಹೆಸರುಗಳು ಕೇಳಿಬರುತ್ತಿವೆ. ಪುನಾರಚನೆಯಾದರೆ ಒಂದು ಡಜನ್‌ಗೂ ಅಧಿಕ ಆಕಾಂಕ್ಷಿಗಳು ಸಂಪುಟಕ್ಕೆ ಸೇರ್ಪಡೆಯಾಗಲಿದ್ದಾರೆ. ಜಾತಿ, ಪ್ರದೇಶವಾರು, ಅನುಭವ, ಪಕ್ಷಕ್ಕೆ ಸಲ್ಲಿಸಿರುವ ಸೇವೆ, ಕ್ಷೇತ್ರದಲ್ಲಿ ಮತದಾರರ ಜೊತೆ ಹೊಂದಿರುವ ಸಂಬಂದ ಸಾಮಥ್ರ‍್ಯ ಈ ಎಲ್ಲ ಅಂಶಗಳ ಆಧಾರದ ಮೇಲೆ ಸಂಪುಟಕ್ಕೆ ತೆಗೆದುಕೊಳ್ಳುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.