ಹೊನ್ನಾವರ: ತಾಲೂಕಿನ ಹೊಸಾಕುಳಿ ಗ್ರಾಮದ ಹಿರೇಮಕ್ಕಿಯ ಖ್ಯಾತ ತಬಲಾ ವಾದಕರಾಗಿದ್ದ ಎನ್.ಎಸ್.ಹೆಗಡೆ (70) ಶನಿವಾರ ನಿಧನರಾಗಿದ್ದಾರೆ.
ಆಕಾಶವಾಣಿಯ ಶ್ರೇಣಿ ಕಲಾವಿದರಾಗಿದ್ದ ಇವರು ಕರಾವಳಿಯಲ್ಲಿ ಅನೇಕ ತಬಲಾ ಪಟುಗಳನ್ನು ತಯಾರು ಮಾಡಿದ ಹಿರಿಮೆ ಹೊಂದಿದ್ದರು. ಕಲಾ ಸಂಗಮ, ಕೂಜಳ್ಳಿಯ ಸ್ವರ ಸಂಗಮ, ಕುಮಟಾದ ಗಂಧರ್ವ ಕಲಾ ಕೇಂದ್ರ ಮೊದಲಾದ ಸಂಗೀತ ಶಾಲೆಗಳಲ್ಲಿ ತಬಲಾ ಶಿಕ್ಷಕರಾಗಿ ಸಾವಿರಾರು ವಿದ್ಯಾರ್ಥಿಗಳಿಗೆ ತಬಲಾ ಕಲಿಸುವ ಮೂಲಕ ಅಪಾರ ಶಿಷ್ಯವರ್ಗ ಹೊಂದಿದ್ದರು. ನೂರಾರು ಸಂಗೀತ ಕಾರ್ಯಕ್ರಮಗಳಲ್ಲಿ ಗಾಯನ ಹಾಗೂ ವಾದನ ಕಾರ್ಯಕ್ರಮಗಳಿಗೆ ಸಾಥ್ ಸಂಗತ್ ತಬಲಾ ಸೋಲೋ ಕಾರ್ಯಕ್ರಮಗಳನ್ನು ನೀಡುವ ಮೂಲಕ ಅಪಾರ ಅಭಿಮಾನಿಗಳನ್ನು ಹೊಂದಿದ್ದರು.
ತಬಲಾ ಶಿಕ್ಷಣವನ್ನು ಹೊನ್ನಾವರದ ಕಾಲೇಜಿನಲ್ಲಿ ಸಂಗೀತ ಶಿಕ್ಷಕರಾಗಿದ್ದ ಪಂಡಿತ ಎಸ್.ಎಂ.ಭಟ್ ಕಟ್ಟಿಗೆ ಅವರಲ್ಲಿ ತಬಲಾ ತರಬೇತಿ ಪಡೆದು, ಶಿರಸಿಯ ಕಲ್ಗುಂಡಿಕೊಪ್ಪದ ಶ್ರೀಪಾದ ರಾವ್ ಅವರ ಬಳಿ ಶಿಕ್ಷಣ ಮುಂದುವರಿಸಿದರು. ಧಾರವಾಡದ ಆಕಾಶವಾಣಿ ನಿಲಯ ಕಲಾವಿದರಾಗಿದ್ದ ಪಂಡಿತ್ ಜಿ.ಎನ್ ಪಾರ್ವತೀಕರ ಅವರಲ್ಲಿ ಹೆಚ್ಚಿನ ತಬಲಾ ಶಿಕ್ಷಣ ಪಡೆದಿದ್ದರು. ತಬಲಾ ವಿದ್ವತ್ ಪರೀಕ್ಷೆಯಲ್ಲಿ ರಾಜ್ಯಕ್ಕೆ ಎರಡನೇ ಸ್ಥಾನ ಪಡೆಯುವ ಮೂಲಕ ಸಾಧನೆ ಮಾಡಿದ್ದರು. ಅವರು ಪತ್ನಿ ಹಾಗೂ ಅಪಾರ ಶಿಷ್ಯ ವೃಂದ ಹಾಗೂ ಅಭಿಮಾನಿಗಳನ್ನು ಅಗಲಿದ್ದಾರೆ. ಇವರ ನಿಧನಕ್ಕೆ ಕಲಾವಿದರು, ಸಂಗೀತ ಪ್ರೇಮಿಗಳು ಸಂತಾಪ ಸೂಚಿಸಿದ್ದಾರೆ.