ಡೆಹ್ರಾಡೂನ್: ಪ್ರಧಾನಿ ನರೇಂದ್ರ ಮೋದಿ ಇಂದು ಉತ್ತರಾಖಂಡದ ರುದ್ರಪ್ರಯಾಗ ಜಿಲ್ಲೆಯ ಕೇದಾರನಾಥ ದೇವಾಲಯದಲ್ಲಿ ಪ್ರಾರ್ಥನೆ ಸಲ್ಲಿಸಿದ ಬಳಿಕ ಗೌರಿಕುಂಡ್-ಕೇದಾರನಾಥ ರೋಪ್ವೇ ಅಥವಾ ಕೇಬಲ್ ಕಾರ್ ಯೋಜನೆಗೆ ಶಂಕುಸ್ಥಾಪನೆ ಮಾಡಿದರು.
ಇಂದು ಕೇದಾರನಾಥಕ್ಕೆ ಭೇಟಿ ನೀಡಿದ ನಂತರ ಮೋದಿಯವರು ಬದರಿನಾಥ ದೇವಾಲಯಕ್ಕೂ ಭೇಟಿ ನೀಡಿದರು.
ಉತ್ತರಾಖಂಡ್ ರಾಜ್ಯಕ್ಕೆ ಎರಡು ದಿನಗಳ ಪ್ರವಾಸದಲ್ಲಿರುವ ಮೋದಿ ಅಲ್ಲಿ ನಡೆಯುತ್ತಿರುವ ವಿವಿಧ ಅಭಿವೃದ್ಧಿ ಯೋಜನೆಗಳನ್ನು ಪರಿಶೀಲಿಸಲಿದ್ದಾರೆ ಮತ್ತು ಕೆಲವು ಹೊಸ ಯೋಜನೆಗಳಿಗೆ ಶಂಕುಸ್ಥಾಪನೆ ಮಾಡಲಿದ್ದಾರೆ.
ಇದಕ್ಕೂ ಮುನ್ನ ಭಾರತೀಯ ವಾಯುಪಡೆಯ (ಐಎಎಫ್) ವಿಮಾನದಲ್ಲಿ ಡೆಹ್ರಾಡೂನ್ನ ಜಾಲಿ ಗ್ರಾಂಟ್ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಪ್ರಧಾನಿ ಅವರನ್ನು ಗವರ್ನರ್ ಲೆಫ್ಟಿನೆಂಟ್ ಜನರಲ್ ಗುರ್ಮಿತ್ ಸಿಂಗ್, ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಮತ್ತು ಕೇಂದ್ರ ಸಚಿವ ಅಜಯ್ ಭಟ್ ಅವರು ಬರಮಾಡಿಕೊಂಡರು.
ಕೇದಾರನಾಥ ದೇಗುಲದಲ್ಲಿ ಪೂಜೆ ನೆರವೇರಿಸಿದ ನಂತರ ಪ್ರಧಾನಮಂತ್ರಿಯವರು 9.7 ಕಿಮೀ ಗೌರಿಕುಂಡ್-ಕೇದಾರನಾಥ ರೋಪ್ವೇ ಯೋಜನೆಗೆ ಶಂಕುಸ್ಥಾಪನೆ ಮಾಡಿದರು. ರೋಪ್ವೇ ಮೂಲಕ ಭಕ್ತರು ಗೌರಿಕುಂಡ್ನಿಂದ 30 ನಿಮಿಷಗಳಲ್ಲಿ ದೇವಸ್ಥಾನವನ್ನು ತಲುಪಬಹುದು.
ಪೂಜೆ ನೆರವೇರಿಸಿದ ಪುರೋಹಿತರು ಪ್ರಧಾನಿಯವರಿಗೆ ದೇಶವನ್ನು ಪ್ರಗತಿಯತ್ತ ಕೊಂಡೊಯ್ಯುವ ಶಕ್ತಿ ನೀಡಲಿ ಎಂದು ಪ್ರಾರ್ಥಿಸಿದರು.
ಪ್ರಧಾನಿ ಮೋದಿ ಅವರು ಆದಿ ಗುರು ಶಂಕರಾಚಾರ್ಯರ ಸಮಾಧಿ ಸ್ಥಳಕ್ಕೂ ಭೇಟಿ ನೀಡಿ ಕೆಲಕಾಲ ಕಳೆದರು.
ಬದರಿನಾಥ ಧಾಮದಲ್ಲಿ ಪ್ರಧಾನಿ ಮೋದಿ ಅವರು ನದಿ ತೀರದ ಅಭಿವೃದ್ಧಿ ಯೋಜನೆಗಳ ಪ್ರಗತಿಯನ್ನು ಪರಿಶೀಲಿಸಿದರು. ಇದು ಪ್ರಧಾನಿಯಾಗಿ ಕೇದಾರನಾಥಕ್ಕೆ ಪ್ರಧಾನಿ ಮೋದಿಯವರ ಆರನೇ ಮತ್ತು ಬದರಿನಾಥಕ್ಕೆ ಎರಡನೇ ಭೇಟಿಯಾಗಿದೆ. ಪ್ರಧಾನಿ ಭೇಟಿ ಹಿನ್ನೆಲೆಯಲ್ಲಿ ಎರಡು ಪ್ರಸಿದ್ಧ ಬೆಟ್ಟದ ದೇವಾಲಯಗಳ ಸುತ್ತ ಭದ್ರತೆಯನ್ನು ಬಿಗಿಗೊಳಿಸಲಾಗಿತ್ತು. ಎರಡೂ ದೇವಾಲಯಗಳನ್ನು ಕ್ವಿಂಟಲ್ ಗಟ್ಟಲೆ ಹೂವಿನಿಂದ ಅಲಂಕರಿಸಲಾಗಿದೆ.
ಕೃಪೆ: http://new13.in