ದಾಂಡೇಲಿ: ನಗರದ ಅಂಬೇವಾಡಿಯಲ್ಲಿ ಸೆಪ್ಟಿಕ್ ಚೇಂಬರೊಂದರಿಂದ ಸಂಪರ್ಕ ಕೊಡುವ ಮುನ್ನವೆ ತ್ಯಾಜ್ಯ ನೀರು ಹೊರ ಹರಿಯುತ್ತಿರುವುದು ಕಂಡುಬಂದಿದೆ.
ನಗರದೆಲ್ಲೆಡೆ ಯುಜಿಡಿ ಕಾಮಗಾರಿ ನಡೆಯುತ್ತಿದ್ದು, ಅಂತಿಮ ಹಂತದಲ್ಲಿದೆ. ಈಗಾಗಲೆ ಕಾಲಾವಧಿ ಮುಗಿದಿರುವುದರಿಂದ ನಿಗದಿತವಾದ ಕಾಲಮಿತಿಯೊಳಗೆ ಯುಜಿಡಿ ಕಾಮಗಾರಿ ಮುಗಿಸಬೇಕಾದ ಜವಾಬ್ದಾರಿ ಯುಜಿಡಿ ಗುತ್ತಿಗೆ ಸಂಸ್ಥೆಯ ಮೇಲಿದೆ. ಯುಜಿಡಿ ಕಾಮಗಾರಿಗಾಗಿ ಅಲ್ಲಲ್ಲಿ ಸೆಪ್ಟಿಕ್ ಚೇಂಬರ್ ಅನ್ನು ನಿರ್ಮಿಸಲಾಗಿದೆ. ನಗರದಲ್ಲಿ ಪೂರ್ತಿ ಪ್ರಮಾಣದಲ್ಲಿ ಕಾಮಗಾರಿ ಮುಕ್ತಾಯವಾಗದ ಕಾರಣ ಯುಜಿಡಿ ಸೆಪ್ಟಿಕ್ ಚೇಂಬರಿಗೆ ಸಂಪರ್ಕ ನೀಡಲಾಗಿಲ್ಲ.
ಆದರೆ, ಅಂಬೇವಾಡಿಯಲ್ಲಿ ಸೆಪ್ಟಿಕ್ ಚೇಂಬರ್‌ನಿಂದ ತ್ಯಾಜ್ಯ ನೀರು ಉಕ್ಕಿ ಪಕ್ಕದಲ್ಲೆ ಇರುವ ಶಾಲೆಯತ್ತ ಹರಿಯತೊಡಗಿದೆ. ಇದು ಸ್ಥಳೀಯ ಶಾಲಾ ವಿದ್ಯಾರ್ಥಿಗಳ ಮತ್ತು ಸ್ಥಳೀಯರ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವ ಸಾಧ್ಯತೆ ಎದುರಾಗಿದೆ. ಯುಜಿಡಿ ಪೈಪ್ಲೈನ್ ಸಂಪರ್ಕ ಕೊಡುವ ಮುನ್ನವೇ ಹೀಗಾದರೆ, ಮುಂದೆ ಹೇಗೆ ಎಂಬ ಚಿಂತೆ ಸ್ಥಳೀಯ ಜನತೆಯದ್ದಾಗಿದೆ. ಸೆಪ್ಟಿಕ್ ಚೇಂಬರ್‌ನಲ್ಲಿರುವ ಸಮಸ್ಯೆಯನ್ನು ಕೂಡಲೆ ಬಗೆಹರಿಸುವಂತೆ ಯುವ ಮುಖಂಡರಾದ ಚಂದ್ರು ಅವರು ಮನವಿ ಮಾಡಿದ್ದಾರೆ.