ಬೆಂಗಳೂರು: ಜಿಲ್ಲಾ ಮಟ್ಟದಲ್ಲಿ ಕಬ್ಬು ಸಾಗಾಣಿಕಾ ವೆಚ್ಚ ಜಾಸ್ತಿಯಾಗದಂತೆ ನೋಡಿಕೊಳ್ಳಲು ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಸಕ್ಕರೆ ಸಚಿವ ಶಂಕರ ಪಾಟೀಲ್ ಮುನೇನಕೊಪ್ಪ ತಿಳಿಸಿದರು.
ವಿಕಾಸ ಸೌಧದಲ್ಲಿ ಕಬ್ಬು ನಿಯಂತ್ರಣ ಮಂಡಳಿ ಸಭೆ ನಡೆಸಿ ಬಳಿಕ ಮಾತನಾಡಿದ ಅವರು, ಶೇ.99.99ರಷ್ಟು ರೈತರಿಗೆ ಕಬ್ಬು ಬಾಕಿ ಪಾವತಿ ಆಗಿದೆ. ವಿಜಯಪುರದ ಬಸವೇಶ್ವರ ಶುಗರ್ಸ್ ಒಂದು ಕಂಪನಿ ಮಾತ್ರ 2.49 ಕೋಟಿ ರೂ. ಬಾಕಿ ಉಳಿಸಿಕೊಂಡಿದೆ. ಅವರಿಗೆ ಈ ತಿಂಗಳಾಂತ್ಯಕ್ಕೆ ಗಡುವು ಕೊಟ್ಟಿದ್ದೇವೆ ಎಂದರು.
ಕೇಂದ್ರ ಸರ್ಕಾರ ಎಫ್‌ಆರ್‌ಪಿ ಪ್ರತಿ ಟನ್‌ಗೆ 150 ರೂ. ಹೆಚ್ಚಿಸಿದೆ. ರಾಜ್ಯ ಸರ್ಕಾರ ಕೂಡಾ ಹೆಚ್ಚಳ ಮಾಡಬೇಕೆಂದು ರೈತರು ಮನವಿ ಮಾಡಿದ್ದಾರೆ. ಈ ಬಗ್ಗೆ ಸಿಎಂ ಜೊತೆ ಚರ್ಚೆ ಮಾಡುತ್ತೇನೆ. ರೈತರು ಕಾರ್ಖಾನೆಗೆ ಕಬ್ಬು ತೆಗೆದುಕೊಂಡು ಹೋಗುವ ವೇಳೆ ಯಾರೂ ಕೂಡಾ ಅಡೆತಡೆ ಮಾಡದಂತೆ ಮನವಿ ಮಾಡಲಾಗಿದೆ ಎಂದು ತಿಳಿಸಿದರು.
ಹೊಸ ಸಕ್ಕರೆ ಕಾರ್ಖಾನೆ ಪ್ರಾರಂಭಕ್ಕೆ 40 ಅರ್ಜಿಗಳು ಬಂದಿವೆ. ಒಂದು ವಾರದಲ್ಲಿ ಕಬ್ಬು ನಿಯಂತ್ರಣ ಮಂಡಳಿ ಸದಸ್ಯರು ಸಿಎಂ ಭೇಟಿ ಮಾಡುತ್ತೇವೆ. ಸಿಬ್ಬಂದಿ ಕೊರತೆ ಬಗ್ಗೆ ಪ್ರಸ್ತಾವನೆ ತಯಾರು ಮಾಡಿದ್ದೇವೆ. ತಂತ್ರಜ್ಞಾನ, ತೂಕ, ರಿಕವರಿ ಮತ್ತಿತರ ವ್ಯವಸ್ಥೆಗಳ ಬಗ್ಗೆ ಗಮನ ಹರಿಸಲು ಸೂಚಿಸಲಾಗಿದೆ ಎಂದರು.