ಹೊನ್ನಾವರ: ಪರೇಶ್ ಮೇಸ್ತಾ ಸಾವಿನ ಪ್ರಕರಣದಲ್ಲಿ ಸಿಬಿಐ ಜೆಎಂಎಫ್‌ಸಿ ನ್ಯಾಯಾಲಯಕ್ಕೆ ಸಲ್ಲಿಸಿರುವ ವರದಿಯಲ್ಲಿ ಪರೇಶ್ ಸಾಯುವ ಮುನ್ನ ಕಾಂಗ್ರೆಸ್ ಸಮಾವೇಶಕ್ಕೆ ಹೋಗಿದ್ದ ಎಂಬುದನ್ನು ಉಲ್ಲೇಖಿಸಿದ್ದು, ಇದು ಆತನನ್ನು ಹಿಂದೂಪರ, ಬಿಜೆಪಿ ಕಾರ್ಯಕರ್ತ ಎಂದು ಬಿಂಬಿಸಿದ್ದವರಿಗೆ ಮತ್ತೊಮ್ಮೆ ಭಾರೀ ಮುಖಂಭಂಗವನ್ನುಂಟು ಮಾಡಿದೆ.
2017ರ ಡಿಸೆಂಬರ್ 6ರಂದು ಕುಮಟಾದಲ್ಲಿ ಕಾಂಗ್ರೆಸ್‌ನ ಬೃಹತ್ ಕಾರ್ಯಕ್ರಮ ನಡೆದಿತ್ತು. ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಹೊನ್ನಾವರದಿಂದ 25 ಕಿ.ಮೀ. ದೂರದ ಕುಮಟಾಕ್ಕೆ ತೆರಳಿ ವಾಪಸ್ಸಾಗಿದ್ದ ಪರೇಶ್, ಡಿ.6ರ ಸಂಜೆ ಪಟ್ಟಣದಲ್ಲಿ ನಡೆದ ಗಲಾಟೆಯ ವೇಳೆ ಕಣ್ಮರೆಯಾಗಿದ್ದ. ಎರಡು ದಿನಗಳ ಬಳಿಕ ಡಿ.8ರಂದು ಪಟ್ಟಣದ ಶೆಟ್ಟಿಕೆರೆಯಲ್ಲಿ ಶವವಾಗಿ ಪತ್ತೆಯಾಗಿದ್ದು, ಬಿಜೆಪಿ, ಹಿಂದೂಪರ ಸಂಘಟನೆಗಳು ಇದು ಕೊಲೆ ಎಂದು ಆಗ್ರಹಿಸಿ ಪ್ರತಿಭಟಿಸಿದ್ದವು. ಅಷ್ಟೇ ಅಲ್ಲದೇ, ಪರೇಶ್ ಹಿಂದೂ ಪರ ಕಾರ್ಯಕರ್ತನಾಗಿದ್ದ, ಬಿಜೆಪಿ- ಸಂಘ ಪರಿವಾರದ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುತ್ತಿದ್ದ ಎಂದು ಬಿಂಬಿಸಿ, ಅನ್ಯ ಕೋಮಿನವರೆ ಹತ್ಯೆ ಮಾಡಿದ್ದಾರೆ ಎಂದು ಪ್ರತಿಭಟನೆಗಳು ಕೋಮು ಗಲಭೆಗೆ ತಿರುಗಲು ಎಡೆ ಮಾಡಿಕೊಟ್ಟಿದ್ದರು.
ಇನ್ನೊಂದೆಡೆ ಅಂದು ಪ್ರತಿಭಟನಾಕಾರರ ಆಗ್ರಹದಂತೆ ಪ್ರಕರಣವನ್ನ ಸಿದ್ದರಾಮಯ್ಯ ಸರ್ಕಾರ ಸಿಬಿಐಗೆ ವಹಿಸಿತ್ತು. ಸುದೀರ್ಘ ನಾಲ್ಕೂವರೆ ವರ್ಷಗಳ ತನಿಖೆ ಬಳಿಕ ಅಂತಿಮ ವರದಿ ಸಲ್ಲಿಸಿರುವ ಸಿಬಿಐ, ಪರೇಶ ಮೇಸ್ತಾನದ್ದು ಕೊಲೆಯಲ್ಲ, ಸಹಜ ಸಾವೆಂದು ಬಿ ರಿಪೋರ್ಟ್ ಸಲ್ಲಿಸಿತ್ತು. ಈ ವರದಿ ಅಂದು ಕೊಲೆ ಎಂದು ಪ್ರತಿಭಟನೆ ನಡೆಸಿದ್ದವರಿಗೆ ಈಗಾಗಲೇ ಉಂಟುಮಾಡಿದ್ದ ಮುಜುಗರವನ್ನ ಮರೆಮಾಚಿಕೊಳ್ಳುವಷ್ಟರಲ್ಲಿ ಇದೀಗ ಪರೇಶ್ ಕಾಂಗ್ರೆಸ್ ಸಮಾವೇಶಕ್ಕೆ ಹೋಗಿದ್ದ ಎನ್ನುವುದು ಇನ್ನಷ್ಟು ಮುಜುಗರಕ್ಕೀಡು ಮಾಡಿದೆ.
ವರದಿಯಲ್ಲಿ ಇನ್ನೂ ಏನೇನಿದೆ?
• ಪರೇಶ್ ಯಾವುದೇ ಹುಡುಗಿಯನ್ನು ಪ್ರೀತಿಸುತ್ತಿರಲಿಲ್ಲ
• ಸ್ನೇಹಿತರೊಂದಿಗೆ ಹೆಚ್ಚು ಒಡನಾಟ ಹೊಂದಿದ್ದ
• ಆಗಾಗ ಮನೆಗೆ ಬರುತ್ತಿರಲಿಲ್ಲ
• ಮೀನು ವ್ಯಾಪಾರ ನಡೆಸುತ್ತಿದ್ದ
• ಅಯ್ಯಪ್ಪ ಮಾಲೆ ಧರಿಸಲು ತಂದೆ ಅನುಮತಿ ಪಡೆದಿದ್ದ