ಕುಮಟಾ: ದಶಕಗಳ ಬೇಡಿಕೆಯಂತೆ ದ್ವೀಪ ಗ್ರಾಮಕ್ಕೆ ಸೇತುವೆ ನಿರ್ಮಿಸಿ ಒಂದೂವರೆ ವರ್ಷ ಕಳೆದರೂ ಸಂಪರ್ಕ ರಸ್ತೆ ನಿರ್ಮಿಸದ ಕಾರಣ ತಾಲೂಕಿನ ಕೋಡ್ಕಣಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಐಗಳಕುರ್ವೆ ಗ್ರಾಮಸ್ಥರಿಗೆ ಸೇತುವೆ ಸೌಲಭ್ಯ ಮರೀಚಿಕೆಯಾಗಿದೆ.
ತಾಲೂಕು ಕೇಂದ್ರದಿಂದ ಸುಮಾರು 20 ಕಿ.ಮೀ. ದೂರದಲ್ಲಿರುವ ಐಗಳಕುರ್ವೆ ನಡುಗಡ್ಡೆಗೆ ತಲುಪಲು ದೋಣಿಯೇ ಆಧಾರ. ಈ ಗ್ರಾಮದಲ್ಲಿ ಸುಮಾರು 150ಕ್ಕೂ ಅಧಿಕ ಕುಟುಂಬಗಳು ವಾಸವಾಗಿವೆ. ಮೀನುಗಾರಿಕೆ ಮತ್ತು ಕೃಷಿಯೇ ಇಲ್ಲಿನ ಜನರ ಜೀವನೋಪಾಯದ ವೃತ್ತಿಯಾಗಿದೆ. ಬಡ ಮತ್ತು ಹಿಂದುಳಿದ ವರ್ಗಗಳಿಗೆ ಸೇರಿದ ಇಲ್ಲಿನ ಗ್ರಾಮಸ್ಥರಿಗೆ ಮಳೆಗಾಲ ಶುರುವಾಯಿತೆಂದರೆ ಪಟ್ಟಣದ ಸಂಪರ್ಕವೇ ಕಡಿತಗೊಳ್ಳುತ್ತದೆ. ಯರಾದರೂ ಅನಾರೋಗ್ಯಕ್ಕೊಳಗಾದರೆ ಅವರನ್ನು ಆಸ್ಪತ್ರೆಗೆ ಸೇರಿಸುವುದೇ ಸವಾಲಿನ ಪ್ರಶ್ನೆಯಾಗುತ್ತದೆ.
ಮಳೆಗಾಲದಲ್ಲಂತೂ ನೆರೆ ಬರುವವುದು ಇಲ್ಲಿನ ಗ್ರಾಮಸ್ಥರಿಗೆ ಸಾಮಾನ್ಯವಾಗಿದ್ದರಿಂದ ಸಂಕಷ್ಟದಲ್ಲೆ ಜೀವನ ಸಾಗಿಸುವ ದುಃಸ್ಥಿತಿ ಇದೆ. ಹಾಗಾಗಿ ಕೋಡ್ಕಣಿ ಮತ್ತು ಐಗಳಕುರ್ವೆ ನಡುವೆ ಹರಿದಿರುವ ಅಘನಾಶಿನಿ ನದಿಗೆ ಸೇತುವೆ ನಿರ್ಮಿಸಿಕೊಡಿ ಎಂಬುದು ದ್ವೀಪ ಗ್ರಾಮದ ಹಲ ದಶಕಗಳ ಬೇಡಿಕೆಯಾಗಿತ್ತು. ಹಲವು ಮನವಿ, ಹೋರಾಟಗಳ ಬಳಿಕ ಅಂತೂ ಶಾರದಾ ಶೆಟ್ಟಿ ಅವರು ಶಾಸಕರಾಗಿದ್ದಾಗ ಈ ಐಗಳಕುರ್ವೆ ಗ್ರಾಮಕ್ಕೆ 22 ಕೋಟಿ ರೂ.ಗಳ ಬೃಹತ್ ಸೇತುವೆ ಮಂಜೂರಿ ಮಾಡಿಸಿದ್ದಾರೆ. ಕಾಮಗಾರಿ ಗುತ್ತಿಗೆ ಪಡೆದ ಹುಬ್ಬಳ್ಳಿಯ ಡಿಆರ್‌ಎನ್ ಇನ್ಪಾಸ್ಟಕ್ಚರ್ ಪ್ರೆ. ಲಿ. ಕಂಪನಿ 2018ರಲ್ಲಿಯೇ ಕಾಮಗಾರಿ ಆರಂಭಿಸಿ ಮಾರ್ಚ್ 2021ರಲ್ಲೆ ಕಾಮಗಾರಿ ಮುಗಿಸಿದೆ. ಸೇತುವೆಗೆ ಸಂಪರ್ಕ ರಸ್ತೆ ಸೇರಿ ಒಟ್ಟು 311 ಮೀಟರ್ ಉದ್ದದ ಸೇತುವೆ ಕಾಮಗಾರಿಯಲ್ಲಿ ಸಂಪರ್ಕ ರಸ್ತೆಯೇ ನಿರ್ಮಿಸಿಲ್ಲ. ಸೇತುವೆಯ ಎರಡು ಬದಿಯಲ್ಲಿ ಸುಮಾರು 15ರಿಂದ 20 ಅಡಿ ಯಷ್ಟು ಮಣ್ಣು ತುಂಬಿ ಸಂಪರ್ಕ ರಸ್ತೆ ನಿರ್ಮಿಸುವ ಕಾರ್ಯ ಮಾತ್ರ ಈತನ ನಡೆದಿದೆ.
ಕೋಟ್ಯಂತರ ರೂ. ಖರ್ಚು ಮಾಡಿ ನಿರ್ಮಿಸಲಾದ ಸೇತುವೆ ಐಗಳಕುರ್ವೆ ಗ್ರಾಮಸ್ಥರಿಗೆ ಪ್ರಯೋನಕ್ಕೆ ಬಾರದಂತಾಗಿದೆ. ಹಲವು ಹೋರಾಟಗಳ ಮೂಲಕ ನಿರ್ಮಾಣವಾದ ಸೇತುವೆಯಿಂದ ಆ ದ್ವೀಪ ಗ್ರಾಮಕ್ಕೆ ರಸ್ತೆ ಸಂಪರ್ಕ ಕಲ್ಪಿಸಬೇಕಾದ ಜನಪ್ರತಿನಿಧಿಗಳು ದಿವ್ಯ ನಿರ್ಲಕ್ಷ ವಹಿಸಿರುವುದು ವಿಪರ್ಯಾಸ.
ಈ ಅಪೂರ್ಣ ಸೇತುವೆ ಕಾಮಗಾರಿಯನ್ನು ಖಂಡಿಸಿ ಅಲ್ಲಿನ ಗ್ರಾಮಸ್ಥರು ಇತ್ತೀಚೆಗೆ ಪ್ರತಿಭಟನೆ ನಡೆಸಿದ ಪರಿಣಾಮ ಗುತ್ತಿಗೆ ಕಂಪನಿ ಸದ್ಯದ ಮಟ್ಟಿಗೆ ಸೇತುವೆ ಮೇಲೆ ಕಾಲ್ನಡಿಗೆಯಲ್ಲಿ ತೆರಳಲು ಕಬ್ಬಿಣದ ಮೆಟ್ಟಿಲು ಅಳವಡಿಸಿಕೊಟ್ಟಿದೆ. ಆ ಮೆಟ್ಟಿಲ ಮೇಲೆ ತೆರಳಲು ಪ್ರಯಾಸದಾಯಕವಾಗಿದ್ದರಿಂದ ವೃದ್ಧರು, ಚಿಕ್ಕ ಮಕ್ಕಳು, ಮಹಿಳೆಯರು ಸೇತುವೆ ಮೇಲೆ ಹತ್ತಲು ಪರದಾಡುವಂತಾಗಿದೆ. ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳನ್ನು ಕೇಳಿದರೆ, ಸಂಪರ್ಕ ರಸ್ತೆ ನಿರ್ಮಿಸುವ ಜಾಗ ಖಾಸಗಿಯವರದ್ದಾಗಿದೆ. ಅವರು ತಕರಾರು ಮಾಡಿದ್ದರಿಂದ ಸಂಪರ್ಕ ರಸ್ತೆ ನಿರ್ಮಿಸಲು ಸಾಧ್ಯವಾಗಿಲ್ಲ ಎಂಬುದು ಅವರ ವಾದ. ಜಮೀನಿನ ಮಾಲೀಕರಿಗೆ ಪರಿಹಾರ ನೀಡಿ ಎಂದರೆ, ಮಾಲ್ಕಿ ಜಾಗಕ್ಕೆ ಸರ್ಕಾರ ನೀಡುವ ಕವಡೆ ಕಾಸನ್ನು ಮಾಲೀಕರು ಪಡೆಯಲು ಸಿದ್ಧರಿಲ್ಲ ಎನ್ನುತ್ತಾರೆ.
ಒಟ್ಟಾರೆ ಈ ಸೇತುವೆ ಕಾಮಗಾರಿಯನ್ನು ಪೂರ್ಣಗೊಳಿಸಲು ಶಾಸಕರು, ತಾಲೂಕು ಆಡಳಿತದ ಅಧಿಕಾರಿಗಳು ಮುಂದಾಗಿ, ಸಂಪರ್ಕ ರಸ್ತೆ ನಿರ್ಮಿಸಲು ಎದುರಾದ ಸಮಸ್ಯೆಯನ್ನು ಪರಿಹರಿಸಿಕೊಳ್ಳಬೇಕಿದೆ. ಇಲ್ಲವಾದರೆ 22 ಕೋಟಿ ರೂ. ಖರ್ಚು ಮಾಡಿ ನಿರ್ಮಿಸಲಾದ ಸೇತುವೆ ಕಾಮಗಾರಿ ನಿರರ್ಥಕವಾಗಲಿದೆ. ಅದಕ್ಕೆ ಅವಕಾಶ ನೀಡದೇ ಶಾಸಕರು ಮತ್ತು ಉಪವಿಭಾಗಾಧಿಕಾರಿಗಳು ಈ ಬಗ್ಗೆ ಸೂಕ್ತ ಕ್ರಮ ವಹಿಸಬೇಕೆಂಬುದು ಐಗಳಕುರ್ವೆ ಗ್ರಾಮಸ್ಥರಾದ ಗಣಪತಿ ಪಟಗಾರ, ಮೋಹನ ಪಟಗಾರ ಇತರರ ಆಗ್ರಹವಾಗಿದೆ.