ನವದೆಹಲಿ:ಕಳೆದ ಎಂಟು ವರ್ಷಗಳಲ್ಲಿ ಮೀನು ಉತ್ಪಾದನೆ, ರಫ್ತು ಮತ್ತು ಮೂಲಸೌಕರ್ಯ ಅಭಿವೃದ್ಧಿಯನ್ನು ಸುಧಾರಿಸಲು ಸರ್ಕಾರು ಹಲವಾರು ಕ್ರಮಗಳನ್ನು ಕೈಗೊಂಡಿದೆ. ಪ್ರಸ್ತುತ ಭಾರತ ಮೀನು ಉತ್ಪಾದನೆಯಲ್ಲಿ ವಿಶ್ವದಲ್ಲೇ 3ನೇ ಸ್ಥಾನದಲ್ಲಿದೆ ಎಂದು ಕೇಂದ್ರ ಮೀನುಗಾರಿಕೆ, ಪಶುಸಂಗೋಪನೆ ಮತ್ತು ಹೈನುಗಾರಿಕೆ ಖಾತೆ ರಾಜ್ಯ ಸಚಿವ ಡಾ.ಎಲ್.ಮುರುಗನ್ ಹೇಳಿದ್ದಾರೆ.
ಬೆಂಗಳೂರಿನಲ್ಲಿ ನಡೆದ ಒಳನಾಡು ಮೀನುಗಾರಿಕಾ ಶೃಂಗಸಭೆಯಲ್ಲಿ ಮಾತನಾಡಿದ ಅವರು, ಮೀನು ಉತ್ಪಾದನೆಯಲ್ಲಿ ಭಾರತ ವಿಶ್ವದಲ್ಲಿ ಮೂರನೇ ಸ್ಥಾನದಲ್ಲಿದೆ ಎಂದಿದ್ದಾರೆ. ಕರ್ನಾಟಕವನ್ನು ನಿರ್ದಿಷ್ಟವಾಗಿ ಉಲ್ಲೇಖಿಸಿದ ಕೇಂದ್ರ ಸಚಿವರು, 2020-21 ರಿಂದ ಇಲ್ಲಿಯವರೆಗೆ ಮೂಲಸೌಕರ್ಯ ಸೌಲಭ್ಯಗಳ ಅಭಿವೃದ್ಧಿಗಾಗಿ ಪ್ರಧಾನ ಮಂತ್ರಿ ಮತ್ಸ್ಯ ಸಂಪದ ಯೋಜನೆಯ (ಪಿಎಂಎಂಎಸ್‌ವೈ) ಪ್ರಮುಖ ಯೋಜನೆಯಡಿ ರಾಜ್ಯಕ್ಕೆ 734.77 ಕೋಟಿ ರೂಪಾಯಿಗಳನ್ನು ನಿಗದಿಪಡಿಸಲಾಗಿದೆ ಎಂದು ಹೇಳಿದರು.
ಮಂತ್ರಿ ಮತ್ಸ್ಯ ಸಂಪದ ಯೋಜನೆಯ ಅಡಿಯಲ್ಲಿ, ಮಂಗಳೂರು ಮೀನುಗಾರಿಕಾ ಬಂದರಿನ ಮೂರನೇ ಹಂತದ ವಿಸ್ತರಣೆ, ಗಂಗೊಳ್ಳಿ ಮೀನುಗಾರಿಕಾ ಬಂದರಿನ ಎರಡನೇ ಹಂತ, ಅಳ್ವೆಕೋಡಿ ಮತ್ತು ತೆಂಗಿನಗುಂಡಿ ಫಿಶ್ ಲ್ಯಾಂಡಿಂಗ್ ಕೇಂದ್ರಗಳನ್ನು ಪೂರ್ಣಗೊಳಿಸಲು 53 ಕೋಟಿ ರೂಪಾಯಿಗಳನ್ನು ನೀಡಲಾಗಿದೆ ಎಂದಿದ್ದಾರೆ.
ಉತ್ತರ ಕನ್ನಡ ಜಿಲ್ಲೆಯ ಮಾಜಾಳಿಯಲ್ಲಿ 250 ಕೋಟಿ ರೂಪಾಯಿ ವೆಚ್ಚದಲ್ಲಿ ಅತ್ಯಾಧುನಿಕ ಮೀನುಗಾರಿಕೆ ಬಂದರಿನ ಅಭಿವೃದ್ಧಿಗೆ ತಾತ್ವಿಕವಾಗಿ ಅನುಮೋದನೆ ನೀಡಲಾಗಿದೆ. ಮಂತ್ರಿ ಮತ್ಸ್ಯ ಸಂಪದ ಯೋಜನೆಯ ಅಡಿಯಲ್ಲಿ, ರಾಜ್ಯದ ಸಾಂಪ್ರದಾಯಿಕ ಮೀನುಗಾರರಿಗೆ ಒಟ್ಟು 136 ಕೋಟಿ ರೂಪಾಯಿ ವೆಚ್ಚದಲ್ಲಿ 114 ಹೊಸ ಆಳ ಸಮುದ್ರ ಮೀನುಗಾರಿಕೆ ಹಡಗುಗಳನ್ನು ಸ್ವಾಧೀನಪಡಿಸಿಕೊಳ್ಳಲು ಅನುಮೋದನೆ ನೀಡಲಾಗಿದೆ. ಒಟ್ಟು 11.31 ಕೋಟಿ ರೂಪಾಯಿ ವೆಚ್ಚದಲ್ಲಿ ಸಾಂಪ್ರದಾಯಿಕ ಮತ್ತು ಯಾಂತ್ರಿಕೃತ ಮೀನುಗಾರಿಕಾ ಹಡಗುಗಳಿಗೆ ಒಟ್ಟು 1000 ಸಂವಹನ ಮತ್ತು ಟ್ರ್ಯಾಕಿಂಗ್ ಸಾಧನಗಳು ಮತ್ತು 781 ಸುರಕ್ಷತಾ ಕಿಟ್‌ಗಳನ್ನು ವಿತರಿಸಲಾಯಿತು. ಯೋಜನೆ ಅಡಿಯಲ್ಲಿ, 62 ಹೊಸ ಐಸ್ ಪ್ಲಾಂಟ್‌ಗಳು ಅಥವಾ ಕೋಲ್ಡ್ ಸ್ಟೋರೇಜ್ ಸೌಲಭ್ಯಗಳು, 799 ಮೀನು ಸಾಗಣೆ ವಾಹನಗಳು, ಒಂದು ಮೀನು ಚಿಲ್ಲರೆ ಮಾರುಕಟ್ಟೆ, 84 ಮೀನು ಗೂಡಂಗಡಿಗಳು ಮತ್ತು ಮೂರು ಮೌಲ್ಯವರ್ಧಿತ ಉದ್ಯಮಗಳನ್ನು 133.15 ಕೋಟಿ ರೂಪಾಯಿಗಳ ಹೂಡಿಕೆಯೊಂದಿಗೆ ಬೆಂಬಲಿಸಲಾಗಿದೆ ಎಂದರು.
ಕೃಪೆ:-http://news13.in