ಕಾರವಾರ: ನಗರದಲ್ಲಿ ಪಾರ್ಕಿಂಗ್ ವ್ಯವಸ್ಥೆ ಬಗ್ಗೆ ಜನರು ಗೊಂದಲಕ್ಕೆ ಒಳಗಾಗುವ ಅವಶ್ಯಕತೆ ಇಲ್ಲ. ಜನತೆಗೆ ಯಾವುದೇ ಸಮಸ್ಯೆ ಆಗದಂತೆ ನೋಡಿಕೊಳ್ಳುವುದಾಗಿ ಶಾಸಕಿ ರೂಪಾಲಿ ಎಸ್.ನಾಯ್ಕ ತಿಳಿಸಿದ್ದಾರೆ.
ನಗರದಲ್ಲಿ ನಿಲ್ಲಿಸುವ ವಾಹನಗಳಿಗೆ ಪಾರ್ಕಿಂಗ್ ಶುಲ್ಕ ವಿಧಿಸುವ ವಿಷಯ ಇದುವರೆಗೆ ನನ್ನ ಗಮನಕ್ಕೆ ಬಂದಿಲ್ಲ. ಈ ಬಗ್ಗೆ ನನ್ನ ಉಪಸ್ಥಿತಿಯಲ್ಲಿ ಯಾವುದೇ ಸಭೆಯೂ ನಡೆದಿಲ್ಲ. ಪಾರ್ಕಿಂಗ್ ವ್ಯವಸ್ಥೆಯನ್ನು ಕಲ್ಪಿಸುವ ಬಗ್ಗೆ ಯೋಜಿಸಲಾಗಿತ್ತು. ಆದರೆ ಇದುವರೆಗೆ ಯಾವುದೇ ರೂಪುರೇಷೆ ಅಂತಿಮವಾಗಿಲ್ಲ. ಜನತೆ ಅನವಶ್ಯಕ ವದಂತಿಗಳಿಗೆ ಕಿವಿಗೊಡಬಾರದು ಎಂದಿದ್ದಾರೆ.
ಕೆಲವೊಂದು ಅಪರಿಚಿತ ವಾಹನಗಳನ್ನು ನಗರದಲ್ಲಿ ಬೇಕಾಬಿಟ್ಟಿಯಾಗಿ ನಿಲ್ಲಿಸುವುದರಿಂದ ಪೊಲೀಸರ ಕರ್ತವ್ಯ ನಿರ್ವಹಣೆಗೆ ತೊಂದರೆ ಅಗಲಿರುವ ಹಿನ್ನೆಲೆಯಲ್ಲಿ ಅವರಿಂದ ಕೆಲವು ಸಲಹೆ ಸೂಚನೆಗಳು ಬಂದಿರಬಹುದು. ಈ ಹಿಂದೆ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದೆ. ಅದನ್ನು ಹೊರತುಪಡಿಸಿ ಈಗ ಮಾಡುತ್ತಿರುವ ಪಾರ್ಕಿಂಗ್ ವಿಷಯದಲ್ಲಿ ಜನತೆ ಯಾವುದೆ ಗೊಂದಲಕ್ಕೆ ಒಳಗಾಗುವುದು ಬೇಡ. ಜನರ ಜತೆ ನಾನು ಇದ್ದು, ಈ ವಿಷಯದಲ್ಲಿ ಜನಪರವಾದ ತೀರ್ಮಾನ ಕೈಗೊಂಡು ಎಲ್ಲ ಗೊಂದಲಗಳಿಗೆ ತೆರೆ ಎಳೆಯುವುದಾಗಿ ಅವರು ತಿಳಿಸಿದ್ದಾರೆ.