ಹೊನ್ನಾವರ: ತಾಲೂಕಿನ ನಗರಬಸ್ತಿಕೇರಿ ಮುಖ್ಯ ರಸ್ತೆ ಅಗಲೀಕರಣ ಸಂಬಂಧಿಸಿದಂತೆ ಸಾರ್ವಜನಿಕರ ಬಳ್ಕೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸಾರ್ವಜನಿಕರ ಸಭೆ ನಡೆಸಿದರು.
ಇಡಗುಂಜಿ ಕ್ರಾಸ್‌ನಿಂದ ಮಣ್ಣಿಗೆವರೆಗೆ ರಸ್ತೆ ಮಂಜೂರಾಗಿದ್ದು, ಈಗಾಗಲೆ ಗ್ರಾಮಸ್ಥರು ಮತ್ತು ಕರ್ನಾಟಕ ಕ್ರಾಂತಿರಂಗ ಬಳ್ಕೂರ ಘಟಕ ಮತ್ತು ರಿಕ್ಷಾ ಚಾಲಕರ ಸಂಘದವರು ಈ ಹಿಂದೆ ಸರ್ವೆ ಆಗಿರುವುದನ್ನು ಪರಿಗಣೆಸಿ ಒತ್ತುವರಿ ತೆರವುಗೊಳಿಸುವಂತೆ ಜಿಲ್ಲಾಧಿಕಾರಿ, ಉಪವಿಭಾಗಾಧಿಕಾರಿಗಳಿಗೆ ತಹಶೀಲ್ದಾರರ ಮೂಲಕ ಮನವಿ ರವಾನಿಸಿದ್ದರು. ಶುಕ್ರವಾರ ಲೋಕೋಪಯೋಗಿ ಇಲಾಖೆಯ ನೇತೃತ್ವದಲ್ಲಿ ತಹಶಿಲ್ದಾರ ನಾಗರಾಜ ನಾಯ್ಕಡ್ ಅವರ ಉಪಸ್ಥಿತಿಯಲ್ಲಿ ಸಾರ್ವಜನಿಕರಿಂದ ಮಾಹಿತಿ ಪಡೆದರು.
ಈ ಹಿಂದೆ ಸರ್ವೆ ಮಾಡಿದಂತೆ ಒತ್ತುವರಿ ತೆರವುಗೊಳಿಸಿ ಚರಂಡಿ ನಿರ್ಮಾಣ ಮಾಡಿ ಕಾಮಗಾರಿ ಆರಂಭಿಸಬೇಕು. ಇಲ್ಲವಾದಲ್ಲಿ ಸಾರ್ವಜನಿಕರ ಪಹಣಿಯ ಮೇಲೆ ದಾಖಲಾಗಿರುವ ಲೋಕೋಪಯೋಗಿ ಎನ್ನುವ ಹೆಸರನ್ನು ತಗೆದುಹಾಕುವಂತೆ ಒತ್ತಾಯಿಸಿದರು. ಕಾಮಗಾರಿ ಬೇರಡೆಗೆ ಸ್ಥಳಾಂತರ ಮಾಡದೇ ಸಾರ್ವಜನಿಜರ ಬೇಡಿಕೆಯಂತೆ ಕಾಮಗಾರಿ ಮುಂದುವರೆಸುವಂತೆ ಒತ್ತಾಯಿಸಿದರು. ಲೋಕೋಪಯೋಗಿ ಇಲಾಖೆಯ ಸಹಾಯಕ ಅಭಿಯಂತರ ಯೋಗಾನಂದ ಮಾತನಾಡಿ, ಮತ್ತೊಮ್ಮೆ ಸರ್ವೆಮಾಡಿ ಕಾಮಗಾರಿ ಆರಂಭಿಸಲಾಗುವುದು ಸಾರ್ವಜಬಿಕರು ಸಹಕರಿಸುವಂತೆ ಮನವಿ ಮಾಡಿದರು.
ತಹಶೀಲ್ದಾರ ನಾಗರಾಜ ನಾಯ್ಕಡ್ ಮಾತನಾಡಿ, ಗ್ರಾಮಸ್ಥರ ಮನವಿಯಂತೆ ಈ ಹಿಂದಿನ ಸರ್ವೆ ಮಾಹಿತಿಯನ್ನು ಇಲಾಖೆಯಿಂದ ಪಡೆದು, ಸರ್ವೆ ನಡೆಸಿ ಮಾಹಿತಿ ತಿಳಿಸುತ್ತೇವೆ. ನಂತರ ಹಂತ ಹಂತವಾಗಿ ಕಾಮಗಾರಿ ನಡೆಸಲಾಗುವುದು. ಕಂದಾಯ ಸೇರಿದಂತೆ ವಿವಿಧ ಇಲಾಖೆಯ ಜೊತೆಗಿರಲಿದೆ ಎಂದು ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಲೋಕೋಪಯೋಗಿ ಇಲಾಖೆಯ ಎಮ್.ಎಸ್.ನಾಯ್ಕ, ಬಳ್ಕೂರ ಗ್ರಾ.ಪಂ. ಅಧ್ಯಕ್ಷೆ ವಿನುತಾ ಪೈ, ಸರ್ವೆ ಇಲಾಖೆಯ ಅಧಿಕಾರಿಗಳು, ಗ್ರಾ.ಪಂ ಸದಸ್ಯರು, ಗ್ರಾಮಸ್ಥರು ಇದ್ದರು.
ನಗರಬಸ್ತಿಕೇರಿ ಮುಖ್ಯ ರಸ್ತೆ ಅಗಲೀಕರಣ; ಸಾರ್ವಜನಿಕರ ಸಭೆ
