ಕುಮಟಾ: ಅಂಬಿಗ ಸಮಾಜದ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಶಿವ-ಗಂಗಾ ಕಲ್ಯಾಣೋತ್ಸವದ ನಿಮಿತ್ತ ರಾಷ್ಟ್ರೀಯ ವಿಚಾರ ಸಂಕಿರಣವನ್ನು ಅ.17ರಂದು ಗಂಗಾವಳಿಯಲ್ಲಿ ಹಮ್ಮಿಕೊಂಡಿದ್ದೇವೆ ಎಂದು ರಾಷ್ಟ್ರೀಯ ಕೋಲಿ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ.ಎಸ್.ಕೆ.ಮೇಲಕಾರ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದೇಶದಲ್ಲಿ ಅಂಬಿಗ ಸಮಾಜವು ಬಹಳ ವಿಸ್ತಾರವಾಗಿ ಹರಡಿದೆ. ಕರ್ನಾಟಕದಲ್ಲಿ ಬೆಸ್ತ, ಅಂಬಿಗ, ಕೋಲಿ ಕಬ್ಬಲಿಗ, ಟೋಕ್ರೆ, ಕೋಲಿ, ಢೋರಕೊಲಿ, ಮಹಾದೇವಕೋಲಿ, ಕೊಯಾ, ಕೋರಿ, ಭಿನ್‌ಕೋಯಾ, ಮೋಗವೀರ, ಬಾರ್ಕಿ, ಭೋವಿ, ತಳವಾರ್, ಇತರೆ ಮೀನುಗಾರ ಸಮಾಜ ಪರಿಶಿಷ್ಟ ಪಂಗಡದಲ್ಲಿದ್ದರೂ ಈವರೆಗೆ ಎಸ್‌ಸಿ, ಎಸ್‌ಟಿ ಮೀಸಲಾತಿ ಮರಿಚಿಕೆಯಾಗಿದೆ. ಸಮಾಜದ ಜನರು ಪುರಾತನ ಕಾಲದಿಂದಲೂ ಬೇಟೆ ಸಂಸ್ಕೃತಿಯನ್ನು ಅಳವಡಿಸಿಕೊಂಡು ನೀರಲ್ಲಿ ಬೇಟೆಯಾಡಿಕೊಂಡು ತಮ್ಮ ಜೀವನ ಸಾಗಿಸುತ್ತಿದ್ದಾರೆ. ಅಲೆಮಾರಿಯಾಗಿರುವ ನಮ್ಮ ಸಮುದಾಯ ಶೈಕ್ಷಣಿಕವಾಗಿ ಹಿಂದುಳಿದಿದೆ. ಇಡೀ ರಾಜ್ಯದಲ್ಲಿ 50 ಲಕ್ಷ ಜನಸಂಖ್ಯೆ ಇರುವ ನಮ್ಮ ಸಮುದಾಯ ರಾಜಕೀಯ ಅವಕಾಶಗಳಿಂದಲೂ ವಂಚಿತವಾಗಿದೆ. ನಮ್ಮ ಸಮುದಾಯದ ಒಬ್ಬ ಶಾಸಕರಿಗೂ ಮಂತ್ರಿ ಸ್ಥಾನ ದೊರೆಯದೇ ಇರುವುದರಿಂದ ನಮ್ಮ ಬೇಡಿಕೆಯನ್ನು ಈಡೇರಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಸಂಸತ್ತಿನಲ್ಲಿ, ವಿಧಾನಸಭೆಯಲ್ಲಿ, ಪರಿಷತ್‌ನಲ್ಲಿ ಗಟ್ಟಿಯಾಗಿ ಧ್ವನಿ ಎತ್ತುವ ಇಚ್ಚಾಶಕ್ತಿ ನಮ್ಮ ಸಮುದಾಯದ ಜನಪ್ರತಿನಿಧಿಗಳಿಗೆ ಇಲ್ಲದಿರುವುದು ನಿಜಕ್ಕೂ ಖೇದಕರ ಸಂಗತಿ ಎಂದರು.
ನಮ್ಮ ಸಮಾಜದ ಪ್ರಮುಖ ಬೇಡಿಕೆಗಳನ್ನು ಈಡೇರಿಸಿಕೊಳ್ಳುವ ನಿಟ್ಟಿನಲ್ಲಿ ಸರ್ಕಾರದ ಗಮನ ಸೆಳೆಯಲು ಶಿವ ಗಂಗಾ ಕಲ್ಯಾಣೋತ್ಸವದ ಪುಣ್ಯ ದಿನದಂದೆ ರಾಷ್ಟ್ರೀಯ ವಿಚಾರ ಸಂಕಿರಣವನ್ನು ಏರ್ಪಡಿಸಿದ್ದೇವೆ. ಗೋಕರ್ಣದ ಗಂಗಾವಳಿಯ ಗಂಗಾಮಾತ ದೇವಾಲಯದ ಕಲ್ಯಾಣ ಮಂಟಪದಲ್ಲಿ ಅ.17ರ ಬೆಳಗ್ಗೆ 11 ಗಂಟೆಗೆ ವಿಚಾರ ಸಂಕಿರಣ ನಡೆಯಲಿದೆ. ಪರಿಶಿಷ್ಟ ಜಾತಿ ಮತ್ತು ಪಂಗಡದಿಂದ ಬಿಟ್ಟುಹೋದ ಮೀನುಗಾರ ಸಮುದಾಯವನ್ನು ಎಸ್‌ಸಿ, ಎಸ್‌ಟಿ ವರ್ಗಕ್ಕೆ ಸೇರಿಸಬೇಕೆಂಬ ಒತ್ತಾಯದ ಜೊತೆಗೆ ಇತರೆ ಬೇಡಿಕೆಗಳನ್ನೊಳಗೊಂಡ ಲೇಖನ ಸಿದ್ಧಪಡಿಸಿ, ಆ ಮೂಲಕ ಸರ್ಕಾರದ ಗಮನ ಸೆಳೆಯುವ ಪ್ರಯತ್ನ ಮಾಡುತ್ತೇವೆ. ಸಭಾ ಕಾರ್ಯಕ್ರಮ ಸಂಜೆ 6 ಗಂಟೆ ನಡೆಯಲಿದೆ. ಅಂದಿನ ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಶ್ರೀನಿವಾಸ ಪೂಜಾರಿ, ಎಂಎಲ್‌ಸಿಗಳಾದ ಬಾಬುರಾವ್ ಚಿಂಚನಸೂರ, ಎನ್ ರವಿಕುಮಾರ, ಗಣಪತಿ ಉಳ್ವೇಕರ್, ಶಾಸಕರಾದ ದಿನಕರ ಶೆಟ್ಟಿ ಸೇರಿದಂತೆ ಸಮಾಜ ಮುಖಂಡರು, ಅಧಿಕಾರಿಗಳು ಪಾಲ್ಗೊಳ್ಳಲಿದ್ದಾರೆ. ಮೀನುಗಾರ ಸಮಾಜದ ಬಂಧುಗಳು ಈ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸುವಂತೆ ವಿನಂತಿಸಿದರು.
ಸುದ್ದಿಗೋಷ್ಠಿಯಲ್ಲಿ ರಾಷ್ಟ್ರೀಯ ಕೋಲಿ ಸಾಹಿತ್ಯ ಪರಿಷತ್‌ನ ಪ್ರಮುಖರಾದ ನೀಲಕಂಠ ಬಲೆಗಾರ್, ಎಸ್ ಕೆ ಅಂಬಿಗ್, ಆರ್ ಕೆ ಅಂಬಿಗ್, ಎಂ ಡಿ ಹರಿಕಾಂತ, ಪಾಂಡುರಂಗ ಅಂಬಿಗ, ವಿಠೋಬಾ ಹರಿಕಂತ್ರ ಇತರರು ಇದ್ದರು.