ಯಲ್ಲಾಪುರ: ಇಂಗ್ಲೀಷ್ ಭಾಷೆಯ ಸರಳವಾಗಿ ಉಚ್ಛಾರ, ಸಂಪೂರ್ಣ ಜ್ಞಾನ ಮತ್ತು ಬಳಕೆ ಮೂಲಕ ಜಾಗತಿಕವಾಗಿ ಉದ್ಯೋಗ ಗಿಟ್ಟಿಸಿಕೊಳ್ಳಲು ಸಾಧ್ಯವಾಗುತ್ತದೆ ಎಂದು ನಂದೊಳ್ಳಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯಶಿಕ್ಷಕ ಭಾಸ್ಕರ ನಾಯ್ಕ ಹೇಳಿದರು.
ಅವರು ಶನಿವಾರ ಬೆಳಿಗ್ಗೆ ವಿಶ್ವದರ್ಶನ ಶಿಕ್ಷಣ ಮಹಾವಿದ್ಯಾಲಯ ಹಾಗೂ ವಿಶ್ವದರ್ಶನ ಕರಿಯರ್ ಅಕಾಡೆಮಿ ಇವರ ಸಹಯೋಗದಲ್ಲಿ ಬಿ. ಇಡಿ ಪ್ರಶಿಕ್ಷಣಾರ್ಥಿಗಳಿಗೆ ಇಂಗ್ಲಿಷ್‌ನಲ್ಲಿ ಹೇಗೆ ಮಾತನಾಡಬೇಕು ಹಾಗೂ ಇಂಗ್ಲಿಷ್‌ನಲ್ಲಿ ಪಠ್ಯವನ್ನು ವಿದ್ಯಾರ್ಥಿಗಳಿಗೆ ಯಾವ ರೀತಿ ಬೋಧಿಸಬೇಕು ಎನ್ನುವ ವಿಷಯದ ಕುರಿತು ಪುನಶ್ಚೇತನ ಕಾರ್ಯಗಾರದ ಉಪನ್ಯಾಸಕರಾಗಿ ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ಕಾರ್ಯದರ್ಶಿ ನರಸಿಂಹ ಕೋಣೆಮನೆ ಮಾತನಾಡಿ, ವಿಶ್ವದರ್ಶನ ಶಿಕ್ಷಣ ಸಂಸ್ಥೆಯ ರಾಯಭಾರಿಗಳಾದ ಪ್ರಶಿಕ್ಷಣಾರ್ಥಿಗಳು ಸಾಧಕರಾಗಲು ಹಾಗೂ ಪೂರಕವಾದ ಕಾರ್ಯಕ್ರಮಗಳ ಮೂಲಕ ವಿಶ್ವದರ್ಶನ ಕರಿಯರ್ ಅಕಾಡೆಮಿ ಮತ್ತು ಶಿಕ್ಷಣ ಸಂಸ್ಥೆ ಹಲವು ಕಾರ್ಯಕ್ರಮವನ್ನು ಹಮ್ಮಿಕೊಳ್ಳಲು ಇಂತಹ ಕಾರ್ಯಕ್ರಮವು ನಾಂದಿಯಾಗಲಿದೆ. ಎಲ್ಲರೂ ಇದರ ಪ್ರಯೋಜನವನ್ನು ಪಡೆದುಕೊಳ್ಳುವಂತೆ ಕರೆ ನೀಡಿದರು.
ಪ್ರಾಂಶುಪಾಲರಾದ ಡಾ.ಎಸ್.ಎಲ್.ಭಟ್ ಮಾತನಾಡಿ, ಸರಳ ಮತ್ತು ಸುಲಭವಾಗಿ ಮಾತನಾಡಲು ಮಹತ್ವದ ಅಂಶಗಳನ್ನು ಉದಾಹರಣೆ ಕೊಟ್ಟು ವಿವರಿಸಿದ ಭಾಸ್ಕರ ನಾಯ್ಕರವರ ಶೈಲಿಯನ್ನು ಶ್ಲಾಘಿಸಿದರು.
ಕರಿಯರ್ ಅಕಾಡೆಮಿಯ ಮುಖ್ಯಸ್ಥರಾದ ಪ್ರಸನ್ನ ಭಟ್, ಶಿಕ್ಷಣ ಸಂಸ್ಥೆಯ ಉಪನ್ಯಾಸಕರು, ಪ್ರಶಿಕ್ಷಣಾರ್ಥಿಗಳು ಉಪಸ್ಥಿತರಿದ್ದರು. ಮಂಜುಳಾ ಸಿದ್ಧಿ ಸ್ವಾಗತಿಸಿದರು. ಶಿವಪ್ರಸಾದ್ ವಂದಿಸಿದರು. ಪ್ರಜ್ಞಾ ನಾಯಕ ಕಾರ್ಯಕ್ರಮ ನಿರ್ವಹಿಸಿದರು.