ಶಿರಸಿ: ಜಾನುವಾರುಗಳಲ್ಲಿ ಹೆಚ್ಚುತ್ತಿರುವ ಲಿಂಪಿಸ್ಕಿನ್ ಖಾಯಿಲೆ ಹರಡದಂತೆ ಹೈನುಗಾರರು ಮುನ್ನೆಚ್ಚರಿಕಾ ಕ್ರಮ ಅನುಸರಿಸುವುದು ಉತ್ತಮ ಎಂದು ಧಾರವಾಡ ಹಾಲು ಒಕ್ಕೂಟದ ನಿರ್ದೇಶಕ ಸುರೇಶ್ಚಂದ್ರ ಹೆಗಡೆ ಕೆಶಿನ್ಮನೆ ಹೇಳಿದರು.
ನಗರದ ಸಾಮ್ರಾಟದಲ್ಲಿ ಶುಕ್ರವಾರ ಸುದ್ದಿಗೋಷ್ಠಿ ಆಯೋಜಿಸಿ ಮಾಹಿತಿ ನೀಡಿದ ಅವರು, ಲಿಂಪಿಸ್ಕಿನ್ ರೋಗ ಜಿಲ್ಲೆಗೂ ಅಡಿಯಿಟ್ಟಿದೆ. ವಾರದಿಂದ ಈಚೆಗೆ ಬನವಾಸಿ, ಕನಕಾಪುರ, ಕಂಡ್ರಾಜಿ, ಮಧುರವಳ್ಳಿ ಭಾಗದಲ್ಲಿ ರೋಗ ಪತ್ತೆಯಾಗಿದೆ. ತಾಲೂಕಿನಲ್ಲಿ 40 ಪ್ರಕರಣಗಳು ದಾಖಲಾಗಿವೆ. ಇದೊಂದು ಮಾರಣಾಂತಿಕ ಖಾಯಿಲೆಯಾಗಿದ್ದು, ಜಾನುವಾರುಗಳು ಸಾವನ್ನಪ್ಪುತ್ತಿವೆ. ಈ ಬಗ್ಗೆ ರೈತರು ಜಾಗೃತರಾಗಬೇಕಿದೆ ಎಂದು ಅವರು ಹೇಳಿದರು.
ಪಶು ವೈದ್ಯಾಧಿಕಾರಿ ಡಾ. ವಿವೇಕ್ ಮಾತನಾಡಿ, ರೋಗದ ಲಕ್ಷಣ ಕಂಡು ಬಂದರೆ ತಕ್ಷಣ ಹತ್ತಿರದ ವೈದ್ಯರನ್ನು ಸಂಪರ್ಕಿಸಬೇಕು. ಪೂರ್ವಭಾವಿಯಾಗಿ ಪಾಕ್ಸ್ ವೈರಸ್ ಲಸಿಕೆ ಹಾಕಿಸಬೇಕು. ರೋಗಕ್ಕೆ ನಿರ್ದಿಷ್ಟವಾದ ಚಿಕಿತ್ಸೆ ಇಲ್ಲ. ಹೀಗಾಗಿ ಸೋಂಕು ನಿವಾರಕ ರಾಸಾಯನಿಕವನ್ನು ಉಪಯೋಗಿಸಿ ಕೊಟ್ಟಿಗೆಯನ್ನು ಸ್ವಚ್ಛಗೊಳಿಸಬೇಕು. ರೋಗಗ್ರಸ್ಥ ಜಾನುವಾರುಗಳನ್ನು ಇತರ ಜಾನುವಾರುಗಳಿಂದ ದೂರ ಇಡಬೇಕು. ಜಾನುವಾರುಗಳನ್ನು ಸ್ವಚ್ಛವಾಗಿ ಇಡಬೇಕು ಎಂದರು. ಲಿಂಪಿಸ್ಕಿನ್ ಇರುವ ಹಸುವಿನ ಹಾಲು ಕುಡಿಯುವುದರಿಂದ ಮಾನವರಿಗೆ ಯಾವುದೇ ಸಮಸ್ಯೆ ಇಲ್ಲ ಎಂದೂ ತಿಳಿಸಿದರು.
ಸುದ್ಧಿಗೋಷ್ಟಿಯಲ್ಲಿ ವಿಸ್ತರಣಾಧಿಕಾರಿ ಅಭಿಷೇಕ ನಾಯ್ಕ, ಜಯಂತ, ಗುರುದರ್ಶನ ಭಟ್ಟ ಇತರರಿದ್ದರು.
YouTube Link: