ಯಲ್ಲಾಪುರ; ಈದ್ ಮಿಲಾದ್ ಹಬ್ಬದ ಪ್ರಯುಕ್ತ ಯಲ್ಲಾಪುರದ ಪೊಲೀಸ್ ಠಾಣೆಯಲ್ಲಿ ಮಸೀದಿಗಳ ಪ್ರಮುಖರು ಮತ್ತು ಮುಸ್ಲಿಂ ಮುಖಂಡರನ್ನು ಕರೆಸಿ ಶಾಂತಿ ಸಭೆ ನಡೆಸಲಾಯಿತು.
ಸಿಪಿಐ ಸುರೇಶ ಯಳ್ಳೂರ ಮಾತನಾಡಿ, ಅ.9 ರಂದು ಶಾಂತಿಯುತವಾಗಿ ಹಬ್ಬ ಆಚರಿಸಬೇಕು. ಮೆರವಣಿಗೆ ವೇಳೆ ಸಾರ್ವಜನಿಕರ ಹಾಗೂ ವಾಹನಗಳ ಸಂಚಾರಕ್ಕೆ ಅಡತಡೆಯಾಗಬಾರದು . ಅನ್ಯ ಧರ್ಮದವರ ಭಾವನೆಗಳಿಗೆ ಧಕ್ಕೆ ಆಗಬಾರದು. ಊಹಾಪೋಹ, ವದಂತಿಗಳಿಗೆ ಪ್ರೋತ್ಸಾಹ ನೀಡಬಾರದು. ಸಣ್ಣ ಪುಟ್ಟ ಸಮಸ್ಯೆಗಳನ್ನು ದೊಡ್ಡ ಮಾಡಬಾರದು. ಮುಖಂಡರು ಪರಿಸ್ಥಿತಿಯನ್ನು ತಮ್ಮ ಹತೋಟಿಯಲ್ಲಿಟ್ಟುಕೊಳ್ಳಬೇಕು. ಪೊಲೀಸರು ಕಾಲ ಕಾಲಕ್ಕೆ ನೀಡುವ ಸೂಚನೆಗಳನ್ನು ಪಾಲಿಸಬೇಕು .
ಸುಪ್ರೀಂ ಕೋರ್ಟಿನ ಮಾರ್ಗಸೂಚಿಗಳನ್ನು ಪಾಲಿಸಬೇಕು. ಮೆರವಣಿಗೆ ಕಾಲಕ್ಕೆ ಹೆಚ್ಚಿನ ಶಬ್ದಮಾಡುವ ದ್ವನಿವರ್ಧಕ ಬಳಸಿ ಸಾರ್ವಜನಿಕರಿಗೆ ಕಿರಿ ಕಿರಿ ಉಂಟುಮಾಡಬಾರದು. ಕಾನೂನು ಮತ್ತು ಸುವ್ಯವಸ್ಥೆಗೆ ಧಕ್ಕೆಯುಂಟಾಗದಂತೆ ನೋಡಿಕೊಳ್ಳಬೇಕು. ಸ್ವಯಂ ಸೇವಕರು ಜವಾಬ್ದಾರಿ ವಹಿಸಿ ಸಹಕರಿಸಬೇಕು. ಕಿಡಗೇಡಿತನ ಮಾಡುವವರನ್ನು ದೂರ ಇಡಬೇಕು ಎಂದು ಸೂಚಿಸಿದರು.
ಮುಸ್ಲಿಂ ಸಮುದಾಯದ ಪ್ರಮುಖರು ಹಬ್ಬ ಆಚರಣೆಯ ವಿಧಾನ ಹಾಗೂ ಮೆರವಣಿಗೆ ನಡೆಸುವ ಕುರಿತು ವಿವರಿಸಿದರು.