ದಾಂಡೇಲಿ: ದಾಂಡಿಯಾ ಉತ್ಸವದಲ್ಲಿ ಮಾತಿಗೆ ಮಾತು ಬೆಳೆಸಿ ದಾಂಡಿಯಾ ಉತ್ಸವ ಸಮಿತಿಯವರ ಮೇಲೆ ತಂಡವೊಂದು ಅವಾಚ್ಯ ಶಬ್ದಗಳಿಂದ ಬೈಯ್ದು ಹಲ್ಲೆ ನಡೆಸಿದ ಘಟನೆ ನಗರದ ಗಾಂಧಿನಗರದಲ್ಲಿ ನಡೆದಿದೆ.
ಈ ಬಗ್ಗೆ ಹಲ್ಲೆಗೊಳಗಾದ ಶಿವನಗೌಡ ಪಾಟೀಲ ಅವರು ನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಅವರು ಘಟನೆಯ ಕುರಿತಂತೆ ದೂರಿನಲ್ಲಿ ವಿವರಿಸಿದ್ದಾರೆ. ಗಾಂಧಿನಗರದ ಗಣಪತಿ ದೇವಸ್ಥಾನದ ಹತ್ತಿರ ದಾಂಡಿಯಾ ಉತ್ಸವ ನಡೆಯುತ್ತಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಜನ ಭಾಗವಹಿಸಿದ್ದ ಹಿನ್ನಲೆಯಲ್ಲಿ ದಾಂಡಿಯಾ ಉತ್ಸವ ಸಮಿತಿಯವರು ಮಹಿಳೆಯರಿಗೆ ಹಾಗೂ ಪುರುಷರಿಗೆ ಪ್ರತ್ಯೇಕವಾಗಿ ದಾಂಡಿಯಾ ಕೋಲಾಟ ನಡೆಸುತ್ತಿದ್ದರು. ಈ ಸಂದರ್ಭದಲ್ಲಿ ಅಲ್ಲಿಗೆ ಬಂದ ಗಾಂಧಿನಗರದ ನಿವಾಸಿಗಳಾದ ವಿಕಾಸ ಸಡೇಕರ, ರಿತೇಶ ಜಾಧವ್, ಪ್ರಜ್ವಲ್ ಜಾಧವ್, ಇಮ್ರಾನ್ ಶೇಖ್, ಬಸವರಾಜ ಚಿತ್ತವಾಡಗಿ ಅವರುಗಳ ತಂಡ ದಾಂಡಿಯಾ ಉತ್ಸವ ಸಮಿತಿಯ ಶಿವನಗೌಡ ಪಾಟೀಲ್‌ಗೆ ನೀವು ಮಹಿಳೆಯರಿಗೆ ಮತ್ತು ಪುರುಷರಿಗೆ ಪ್ರತ್ಯೇಕ ಆಡಿಸಬೇಡಿ. ಎಲ್ಲರನ್ನು ಕೂಡಿ ಆಡಿಸಿರಿ, ಇಲ್ಲವಾದಲ್ಲಿ ದಾಂಡಿಯಾ ಆಟವಾಡಲು ಹಾಕಿದ ಕಂಬವನ್ನು ಕಿತ್ತು ಹಾಕುತ್ತೇವೆ ಎಂದು ಗದರಿಸಿ, ಅವಾಚ್ಯ ಶಬ್ದಗಳಿಂದ ಬೈಯ್ದಿದ್ದಾರೆ.
ಆಗ ಶಿವನಗೌಡ ಪಾಟೀಲ ಮತ್ತು ಸಮಿತಿಯ ಇನ್ನೋರ್ವ ಸದಸ್ಯ ಬುದ್ದಿವಂತಗೌಡ ಪಾಟೀಲ ಅವರು ಹಾಗೆಲ್ಲಾ ಆಡಿಸಲು ಆಗುವುದಿಲ್ಲ. ನೀವೆ ಬೇರೆ ಬೇರೆಯಾಗಿ ಆಡುವುದಾದರೆ ಆಡಿ, ಇಲ್ಲವಾದಲ್ಲಿ ಹೋಗಿ ಎಂದಿದ್ದಾರೆ. ಆಗ ಅವಾಚ್ಯ ಶಬ್ದಗಳಿಂದ ಬೈಯ್ದ ತಂಡ ಏಕಾಏಕಿ ಶಿವನಗೌಡ ಪಾಟೀಲ್ ಅವರ ಮೇಲೆ ಹಲ್ಲೆ ನಡೆಸಿದೆ. ಶಿವನಗೌಡ ಪಾಟೀಲ ಅವರ ತಲೆಗೆ ಗಾಯವಾಗಿದೆ. ಹೀಗೆ ಹೊಡೆದು ಹೋಗುವ ಸಮಯದಲ್ಲಿ ಜೀವ ಬೆದರಿಕೆಯನ್ನು ಒಡ್ಡಿದ್ದಾರೆ. ಶಿವನಗೌಡ ಬಸನಗೌಡ ಪಾಟೀಲ ಅವರು ಐವರ ಮೇಲೆ ನಗರ ಠಾಣೆಗೆ ದೂರು ನೀಡಿದ್ದು, ನಗರ ಪೊಲೀಸರು ದೂರು ಸ್ವೀಕರಿಸಿಕೊಂಡು ಮುಂದಿನ ಕ್ರಮವನ್ನು ಕೈಗೊಂಡಿದ್ದಾರೆ.