ಶಿರಸಿ ತಾಲೂಕಿನ ಹಲಸಿನಕೈ ಅಣ್ಣಪ್ಪ ನಾಯ್ಕರ ಕುಟುಂಬವು ತಮ್ಮ ಕಾಳಿಕಾಂಬಾ ದೇವಾಲಯದಲ್ಲಿ ನವರಾತ್ರಿಯ ಆಚರಣೆಯನ್ನು ಹಲವು ವರ್ಷಗಳಿಂದ ಆಚರಿಸಿಕೊಂಡು ಬಂದಿದ್ದು, ಕಳೆದ 19 ವರ್ಷಗಳಿಂದ ವಿಜಯದಶಮಿಯಂದು ತಾಳಮದ್ದಲೆ ಕಾರ್ಯಕ್ರಮವನ್ನು ಆರಾಧನಾ ಭಾವದಿಂದ ನಡೆಸಿಕೊಂಡು ಬಂದಿರುವುದು ಸ್ತುತ್ಯಾರ್ಹ ಕಲಾಸೇವೆಯಾಗಿದೆ.
ಈ ವರ್ಷದ ತಾಳಮದ್ದಲೆ “ಲವ-ಕುಶ” ವೀರಮಾರುತಿ ಕದಂಬೇಶ್ವರ ಯಕ್ಷ ಬಳಗದಿಂದ ಯಕ್ಷಾರಾಧಕ ರಘುಪತಿ ನಾಯ್ಕ ಅವರ ಮುಂದಾಳತ್ವದಲ್ಲಿ ವಿಜಯದಶಮಿಯಂದು ಸಂಜೆ ಜರುಗಿತು. ಎಂ.ಪಿ. ಹೆಗಡೆ ಉಲ್ಲಾಳಗದ್ದೆ ಭಾಗವತಿಕೆ, ಶ್ರೀಪಾದ ಹೆಗಡೆ ಕಂಚಿಮನೆ ಮದ್ದಲೆ ನುಡಿಸಿ ಸುಶ್ರಾವ್ಯ ಹಿಮ್ಮೇಳ ನೀಡಿ ಮೆರಗು ತಂದರು. ಶ್ರೀರಾಮನಾಗಿ ಖ್ಯಾತ ಅರ್ಥಧಾರಿ ಡಾ. ಜಿ.ಎ. ಹೆಗಡೆ ಸೋಂದಾ ಭಾವನಾತ್ಮಕವಾಗಿ ಮಾತಾಡಿ, ಶ್ರೀರಾಮನ ದುಗುಡ ದುಮ್ಮಾನಗಳನ್ನು ಚಿತ್ರಿಸಿ, ಅಂತರಂಗದ ತುಮುಲಗಳನ್ನು ಆಕರ್ಷಕವಾಗಿ ವ್ಯಕ್ತಪಡಿಸಿದರು. ಹಿರಿಯ ಅರ್ಥಧಾರಿ ಎಂ. ವಿ. ಹೆಗಡೆ ಅಮಚಿಮನೆ ಶತ್ರುಘ್ನನಾಗಿ ಪಾತ್ರೋಚಿತ ನ್ಯಾಯ ಒದಗಿಸಿದರು. ಲವ-ಕುಶರಾಗಿ ಈಶ್ವರ ಗೌಡ ಕುಳ್ಳೆ, ಎಂ.ಟಿ. ಗೌಡ ಅರೆಹಳ್ಳ ತಾಳಮದ್ದಲೆಯನ್ನು ಅರ್ಥಪೂರ್ಣವಾಗಿಸಿದರು. ಮಾಣಿ ಮತ್ತು ವಾಲ್ಮೀಕಿಯ ಪಾತ್ರದಲ್ಲಿ ಹಾಸ್ಯಗಾರ ವೆಂಕಟ್ರಮಣ ಹೆಗಡೆ ಮಾದ್ನಕಳ್ ಮತ್ತು ಸೀತೆಯ ಪಾತ್ರದಲ್ಲಿ ಯುವ ಅರ್ಥಧಾರಿ ಶುಭಾ ನಾಯ್ಕ ಹಲಸಿನಕೈ ಮಿಂಚಿದರು.
ಯಕ್ಷಗಾನ ಪ್ರಯೋಗಕ್ಕೇ ಮೀಸಲಾದ ಈ ಆಖ್ಯಾನವನ್ನು ತಾಳಮದ್ದಲೆಗೆ ವ್ಯವಸ್ಥಿತವಾಗಿ ಅಳವಡಿಸಿ ಸಂಪನ್ನಗೊಳಿಸುವಲ್ಲಿ ಡಾ. ಜಿ. ಎ. ಹೆಗಡೆ ಸೋಂದಾ ಮತ್ತು ರಘುಪತಿ ನಾಯ್ಕ ಹೆಗ್ಗರಣಿ ಅವರ ನಿರ್ದೇಶನ ಫಲಕೊಟ್ಟಿತ್ತು.
ಪ್ರತಿವರ್ಷದ ಪದ್ದತಿಯಂತೆ ಹಲಸಿನಕೈ ಕುಟುಂಬದವರು ಕಲಾವಿದರಿಗೆ ಕಲಾಗೌರವ ನೀಡಿ ಗೌರವಿಸಿದರು. ಮುಖ್ಯ ಅತಿಥಿಯಾಗಿ ಶಿಕ್ಷಕಿ ನೇತ್ರಾವತಿ ಗೌಡ ಕುಳವೆ ಮಾತಾಡಿ ಲವ-ಕುಶ ತಾಳಮದ್ದಲೆ ಅತ್ಯಂತ ಆಪ್ತವಾಗಿ ಅರ್ಥಗರ್ಭಿತವಾಗಿ ಮೂಡಿಬಂದಿದ್ದು, ಪ್ರೇಕ್ಷಕರಿಗೆ, ಸಂಘಟಕರಿಗೆ ರಸದೌತಣದ ತೃಪ್ತಿ ನೀಡಿದೆ ಎಂದರು. ಸುಬ್ರಾಯ ಜಿ. ನಾಯ್ಕ ಕಲ್ಲಳ್ಳಿ ಅಧ್ಯಕ್ಷತೆ ವಹಿಸಿ ಮಾತಾಡಿ ಶುಭ ಹಾರೈಸಿದರು. ರತ್ನಾಕರ ನಾಯ್ಕ, ಕಮಲಾಕರ ನಾಯ್ಕ ಹಲಸಿನಕೈ ಕಾರ್ಯಕ್ರಮಕ್ಕೆ ಸಹಕರಿಸಿ ವಂದಿಸಿದರು.