ಶಿರಸಿ: ಇಂದು ಜಗತ್ತಿನಾದ್ಯಂತ ಯುದ್ಧ, ದೌರ್ಜನ್ಯ, ಅಶಾಂತಿಗಳೇ ಕೂಡಿವೆ. ಪ್ರಸ್ತುತ ಪರಿಸ್ಥಿತಿಯಲ್ಲಿ ಗಾಂಧೀಜಿಯವರ ಶಾಂತಿ, ಸಹಿಷ್ಣುತೆ ತತ್ವಗಳು ಪ್ರತಿಯೊಬ್ಬ ಯುವಕರು ಅಳವಡಿಸಿಕೊಳ್ಳಲೇಬೇಕಾದ ಮಾರ್ಗ ಸೂಚಿಗಳಾಗಿವೆ. ಹಾಗಾಗಿ ವಿದ್ಯಾರ್ಥಿಗಳಾದ ನೀವು ಗಾಂಧೀಜಿಯವರ ತತ್ವವನ್ನ ಪಾಲಿಸುವುದರ ಜೊತೆಗೆ ಲಾಲ್ ಬಹದ್ದೂರ್ ಶಾಸ್ತ್ರಿಜಿಯವರ ಅಭಿವೃದ್ಧಿಯ ನಿಷ್ಠೆಯನ್ನು ನಿಮ್ಮಲ್ಲಿ ಅಳವಡಿಸಿಕೊಳ್ಳಿ ಎಂದು ಎಂಎಂ ಕಾಲೇಜಿನ ಪ್ರಾಚಾರ್ಯ ಡಾ. ಟಿ.ಎಸ್.ಹಳೆಮನೆ ಹೇಳಿದರು.
ಅವರು ಎಂ ಇ ಎಸ್ ನ ಎಂ ಎಂ ಕಲಾ ಮತ್ತು ವಿಜ್ಞಾನ ಮಹಾವಿದ್ಯಾಲಯದಲ್ಲಿ ಹಮ್ಮಿಕೊಂಡಿದ್ದ ಗಾಂಧಿ ಜಯಂತಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿಜಿಯವರ ಜಯಂತಿಯ ಸಂದರ್ಭದಲ್ಲಿ, ಅವರುಗಳ ಭಾವಚಿತ್ರಕ್ಕೆ ಪುಷ್ಪ ಸಮರ್ಪಿಸಿ ಮಾತನಾಡಿದರು.
ಶಾಸ್ತ್ರೀಯವರು ನಮ್ಮ ದೇಶದಲ್ಲಿ ಅಭಿವೃದ್ಧಿಯ ಕ್ರಾಂತಿಯನ್ನು ಹುಟ್ಟು ಹಾಕಿದರು. ಗಾಂಧೀಜಿಯವರು ರೈತ ದೇಶದ ಬೆನ್ನೆಲುಬು ಎಂದಿದ್ದರು. ಶಾಸ್ತ್ರೀಯವರು ರೈತರ ಅಭಿವೃದ್ಧಿಗೆ, ಹಸಿರು ಕ್ರಾಂತಿಗೆ ಕಾರಣರಾಗಿ ಗಾಂಧಿ ತತ್ವವನ್ನು ಪರಿಪಾಲಿಸಿದರು. ಇಂದಿನ ಆಧುನಿಕ ಜಗತ್ತಿನಲ್ಲಿ ಪ್ರತಿಯೊಬ್ಬ ವ್ಯಕ್ತಿಯೂ ಒತ್ತಡದ ಜೀವನವನ್ನು ನಡೆಸುತ್ತಿದ್ದಾನೆ. ಶಾಂತತೆಯ ಸೌಹಾರ್ದತೆಯ ಬಾಳನ್ನ ಬಯಸುತ್ತಿದ್ದಾನೆ. ಹಾಗಾಗಿ ಈ ಮಹಾನ್ ವ್ಯಕ್ತಿಗಳ ಜೀವನ ಕ್ರಮ ಆಧುನಿಕ ಜಗತ್ತಿನ ನಮ್ಮೆಲ್ಲರಿಗೂ ಮಾರ್ಗಸೂಚಿಯಾಗಿದೆ ಎಂದರು. ಈ ಸಂದರ್ಭದಲ್ಲಿ ಕಾಲೇಜಿನ ಪ್ರಾಧ್ಯಾಪಕರುಗಳು, ಶಿಕ್ಷಕೇತರ ಸಿಬ್ಬಂದಿಗಳು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.