ದಾಂಡೇಲಿ: ಶಿರಸಿಯಲ್ಲಿ ನಡೆದ ಜಿಲ್ಲಾ ಮಟ್ಟದ ಪ್ರಾಥಮಿಕ ಮತ್ತು ಪ್ರೌಢಶಾಲೆಗಳ ಶಟಲ್ ಬ್ಯಾಡ್ಮಿಂಟನ್ ಮತ್ತು ಟೇಬಲ್ ಟೆೆನಿಸ್ ಪಂದ್ಯಾವಳಿಯ ಪ್ರೌಢಶಾಲಾ ವಿಭಾಗದ ಶಟಲ್ ಬ್ಯಾಡ್ಮಿಂಟನ್ ಪಂದ್ಯಾವಳಿಯಲ್ಲಿ ನಗರದ ಜನತಾ ಪ್ರೌಢಶಾಲೆಯ ಬಾಲಕರ ತಂಡ ಜಯಭೇರಿ ಬಾರಿಸಿ ಪ್ರಥಮ ಸ್ಥಾನದೊಂದಿಗೆ ವಿಭಾಗೀಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ಜನತಾ ಪ್ರೌಢಶಾಲೆಯ ಪ್ರತಿಭಾನ್ವಿತ ಶಟಲ್ ಬ್ಯಾಡ್ಮಿಂಟನ್ ಪ್ರತಿಭೆಗಳಾದ ನವನೀತ್ ಕಾಮತ್ ಮತ್ತು ಯುವರಾಜ ಹೊಸಮಠ, ಇವರಿಬ್ಬರು ಬಾಲಕರ ವಿಭಾಗದಲ್ಲಿ ನಡೆದ ಪ್ರತಿ ಪಂದ್ಯಾವಳಿಯಲ್ಲಿ ಅತ್ಯುತ್ತಮವಾಗಿ ಪ್ರದರ್ಶನವನ್ನು ನೀಡಿ ವಿಜಯದ ನಗೆ ಬೀರಿ ಬಾಲಕರ ವಿಭಾಗದಲ್ಲಿ ಪ್ರಥಮ ಸ್ಥಾನವನ್ನು ತಮ್ಮದಾಗಿಸಿಕೊಳ್ಳುವಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಪ್ರಥಮ ಸ್ಥಾನ ಪಡೆದ ಈ ತಂಡದಲ್ಲಿ ಸಹ ಆಟಗಾರರಾಗಿ ಪ್ರಖರ್ ವ್ಯಾಸ್, ದುರ್ಗೇಶ್ ರಾಂಗಣೇಕರ, ಪ್ರಣವ್ ಅಸೋಪ ಅವರು ಸಹಕರಿಸಿದ್ದರು.
ಜಿಲ್ಲಾ ಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದು ವಿಭಾಗೀಯ ಮಟ್ಟಕ್ಕೆ ಆಯ್ಕೆಯಾದ ವಿದ್ಯಾರ್ಥಿಗಳ ಸಾಧನೆಗೆ ಜನತಾ ಸಂಯುಕ್ತ ಪದವಿಪೂರ್ವ ವಿದ್ಯಾಲಯದ ಪ್ರಾಚಾರ್ಯರಾದ ಎಂ.ಎಸ್.ಇಟಗಿ, ಜನತಾ ಪ್ರೌಢಶಾಲೆಯ ಮುಖ್ಯೋಪಾಧ್ಯಯರಾದ ಕಿಶೋರ ಕಿಂದಳ್ಕರ್, ದೈಹಿಕ ಶಿಕ್ಷಣ ಶಿಕ್ಷಕಿ ವೀಣಾ ಪ್ರಕಾಶ್ ಮೇಹ್ತಾ, ದೈಹಿಕ ಶಿಕ್ಷಣ ಶಿಕ್ಷಕ ರಮೇಶ್ ಹಾಗೂ ಶಿಕ್ಷಕ ವೃಂದ ಮತ್ತು ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷರಾದ ನವೀನ್ ಕಾಮತ್ ಹಾಗೂ ಸದಸ್ಯರು, ಬಾಲಕರ ತಂಡಕ್ಕೆ ಸಹಕರಿಸಿದ ಜಾನು ಜೋರೆ ಸೇರಿದಂತೆ ನಗರದ ಗಣ್ಯರನೇಕರು ಹರ್ಷ ವ್ಯಕ್ತಪಡಿಸಿ ಅಭಿನಂದನೆ ಸಲ್ಲಿಸಿದ್ದಾರೆ.