ಶಿರಸಿ: ಬೆಳಗಾವಿಯಲ್ಲಿ ನಡೆದ ವಿಭಾಗ ಮಟ್ಟದ ವಿಜ್ಞಾನ ನಾಟಕ ಸ್ಪರ್ಧೆಯಲ್ಲಿ ಒಂದು ಲಸಿಕೆಯ ಕಥೆಯನ್ನು ಮನೋಜ್ಞವಾಗಿ ಕಟ್ಟಿ ಕೊಟ್ಟ ಇಲ್ಲಿನ ಮಾರಿಕಾಂಬಾ ಸರಕಾರಿ ಪ್ರೌಢಶಾಲಾ ವಿದ್ಯಾರ್ಥಿಗಳ ತಂಡ ಪ್ರಥಮ ಸ್ಥಾನ ಪಡೆದು ರಾಜ್ಯ ಮಟ್ಟಕ್ಕೆ ಆಯ್ಕೆಗೊಂಡಿದೆ.
ಶುಕ್ರವಾರ ಬೆಳಗಾವಿಯ ಡಯಟ್ ನೇತೃತ್ವದಲ್ಲಿ ನಡೆದ ಸ್ಪರ್ಧೆಯಲ್ಲಿ ಬೆಳಗಾವಿ ವಿಭಾಗ ಮಟ್ಟದ ಒಟ್ಟೂ ಆರು ಶೈಕ್ಷಣಿಕ ಜಿಲ್ಲೆಯಿಂದ ತಂಡಗಳು ಭಾಗವಹಿಸಿದ್ದವು. ಶಿರಸಿ ಶೈಕ್ಷಣಿಕ ಜಿಲ್ಲೆಯಿಂದ ಆಯ್ಕೆಗೊಂಡು ವಿಭಾಗಮಟ್ಟಕ್ಕೆ ಸ್ಪರ್ಧೆ ಮಾಡಿದ್ದ ಮಾರಿಕಾಂಬಾ ವಿದ್ಯಾರ್ಥಿಗಳು ಅಲ್ಲೂ ಪ್ರಥಮ ಸ್ಥಾನ ಪಡೆದು ಬೆಂಗಳೂರಿನ ದಕ್ಷಿಣ ಜಿಲ್ಲೆಯಲ್ಲಿ ನಡೆಯಲಿರುವ ರಾಜ್ಯಮಟ್ಟದ ಸ್ಪರ್ಧೆಗೆ ಭಾಗವಹಿಸಲು ಅರ್ಹತೆ ಪಡೆದುಕೊಂಡಿದೆ.
ಸಾಂಕ್ರಾಮಿಕ ರೋಗದ ವಿರುದ್ಧದಲ್ಲಿ ಕೆಲಸ ಮಾಡುವ ಲಸಿಕೆಗಳ ಹುಟ್ಟು, ಅವುಗಳ ಬೆಳವಣಿಗೆ, ಜನರ ವಿರೋಧ ಇದ್ದರೂ ಅದನ್ನು ಎದುರಿಸಿ ಜನತೆಯ ಆರೋಗ್ಯ ರಕ್ಷಣೆಗೆ ಕಟಿಬದ್ಧರಾದ ವಿಜ್ಞಾನಿಗಳು ಹಾಗೂ ಅವರು ನೀಡಿದ ಕೊಡುಗೆಯ ಕುರಿತಾದ ಚಿತ್ರಣವನ್ನು ಹೊಂದಿದ ಒಂದು ಲಸಿಕೆಯ ಕಥೆ ಮೂವತ್ತು ನಿಮಿಷದಲ್ಲಿ ಶತಮಾನದ ಸಾಧನೆ ಬಿಚ್ಚಿಟ್ಟಿವೆ ಎಂಬುದು ತೀರ್ಪುಗಾರರ ಮೆಚ್ಚುಗೆಗೆ ಕಾರಣವಾಗಿದೆ.
ಇಡೀ ನಾಟಕದಲ್ಲಿ ವಿಜ್ಞಾನದ ಸಂಗತಿಯನ್ನು ಮನೋಜ್ಞವಾಗಿ ತೆರೆದಿಟ್ಟ ಬಗೆ ಹಾಗೂ ವಿದ್ಯಾರ್ಥಿಗಳ ಭಾವಪೂರ್ಣ ಲವಲವಿಕೆಯ ಅಭಿನಯವು ಪ್ರೇಕ್ಷಕರ ಮನಗೆಲ್ಲಿಸಿ ಪ್ರಥಮ ಸ್ಥಾನ ತನ್ನದಾಗಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ.
ಈ ನಾಟಕದಲ್ಲಿ ತುಳಸಿ ಹೆಗಡೆ, ಎಂ.ವಿ ಶ್ರೇಯಾ, ಸ್ಪಂದನಾ ಭಟ್ಟ, ಜಯಶ್ರೀ ಭಟ್ಟ, ನವ್ಯಾ ಭಟ್ಟ, ಶ್ರೀಜಾ ಭಟ್ಟ, ಮಾನ್ಯ ಹೆಗಡೆ, ಕಿಶನ್ ಕುಮಾರ ಹೆಗಡೆ ಅಚ್ಚುಕಟ್ಟಾಗಿ ಪಾತ್ರಗಳನ್ನು ನಿರ್ವಹಿಸಿ ನಾಟಕ ಪರಿಣಾಮಕಾರಿಯಾಗಿಸಿದರು. ಈಚೆಗಷ್ಟೇ ರಾಜ್ಯ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪಡೆದ ಮಾರಿಕಾಂಬಾದ ಕನ್ನಡ ಭಾಷಾ ಶಿಕ್ಷಕ ನಾರಾಯಣ ಭಾಗ್ವತ್ ಅತ್ಯುತ್ತಮ ನಿರ್ದೇಶಕ ಪ್ರಶಸ್ತಿ ಕೂಡ ಪಡೆದುಕೊಂಡರು. ಈ ನಾಟಕಕ್ಕೆ ವಿಜ್ಞಾನ ಶಿಕ್ಷಕಿ ಜಯಲಕ್ಷ್ಮೀ ಗುನಗಾ ಅಚ್ಚುಕಟ್ಟಾಗಿ ನಿರ್ವಹಣೆ ನಡೆಸಿದ್ದರು.
ಪ್ರಥಮ ಸ್ಥಾನ ಪಡೆದ ಮಾರಿಕಾಂಬಾದ ವಿದ್ಯಾರ್ಥಿ ಹಾಗೂ ಶಿಕ್ಷಕರನ್ನು ಬಿಇಓ ಎಂ.ಎಸ್.ಹೆಗಡೆ, ಡಿಡಿಪಿಐ ಬಸವರಾಜು, ಮಾರಿಕಾಂಬಾ ಪ್ರೌಢಶಾಲೆಯ ಪ್ರಭಾರಿ ಮುಖ್ಯ ಶಿಕ್ಷಕ ಆರ್.ವಿ.ನಾಯ್ಕ, ಶಾಲಾಭಿವೃದ್ದಿ ಸಮಿತಿ ಪದಾಧಿಕಾರಿಗಳು, ಶಿಕ್ಷಕ ವೃಂದ ಅಭಿನಂದಿಸಿದ್ದಾರೆ.