ಮುಂಡಗೋಡ: ತಾಲೂಕಿನ ಹುನಗುಂದ ಗ್ರಾ.ಪಂ ವ್ಯಾಪ್ತಿಯ ಅತ್ತಿವೇರಿ ಗ್ರಾಮಕ್ಕೆ ಸಾರಿಗೆ ಬಸ್ ವ್ಯವಸ್ಥೆ ಕಲ್ಪಿಸುವಂತೆ ಒತ್ತಾಯಿಸಿ ಆ ಭಾಗದ ವಿದ್ಯಾರ್ಥಿಗಳು ಹಾಗೂ ಗ್ರಾಮಸ್ಥರು ಪಟ್ಟಣದಲ್ಲಿ ರಸ್ತೆ ತಡೆ ನಡೆಸಿ ಪ್ರತಿಭಟಿಸಿದರು.
ಪಟ್ಟಣದ ಶಿವಾಜಿ ಸರ್ಕಲ್‌ನಲ್ಲಿ ಅರ್ಧ ತಾಸಿಗೂ ಅಧಿಕ ಕಾಲ ರಸ್ತೆ ತಡೆ ನಡೆಸಿದ್ದರಿಂದ ಕೆಲಕಾಲ ವಾಹನಗಳ ಸಂಚಾರಕ್ಕೆ ವ್ಯತ್ಯಯ ಉಂಟಾಯಿತು. ನಂತರ ವಿದ್ಯಾರ್ಥಿಗಳು ಬಸ್ ನಿಲ್ದಾಣದ ಗೇಟ್ ಬಳಿ ಕುಳಿತು ಪ್ರತಿಭಟನೆಗೈದರು. ಎಷ್ಟೇ ಮನವೊಲಿಸಿದರು, ಬಿರು ಬಿಸಿಲಿನಲ್ಲಿಯೂ ವಿದ್ಯಾರ್ಥಿಗಳು ಸ್ಥಳ ಬಿಟ್ಟು ಕದಲಿಲ್ಲ. ತಾಸಿನ ಒಳಗಾಗಿ ಬರುತ್ತೇನೆ ಎಂದ ಸಾರಿಗೆ ಅಧಿಕಾರಿ ಎಚ್.ವೈ.ಚಲವಾದಿಯವರು ಸ್ಥಳಕ್ಕೆ ಬರಲು 3 ತಾಸು ತೆಗೆದುಕೊಂಡಿದ್ದರಿಂದ ವಿದ್ಯಾರ್ಥಿಗಳು ಅವರು ಬರುವರೆಗೂ ನಿಲ್ದಾಣದ ಗೇಟ್ ಬಳಿ ಕುಳಿತಿದ್ದರಿಂದ ಸಾರಿಗೆ ಬಸ್ ಪ್ರಯಾಣಿಕರು ಪರದಾಡಬೇಕಾಯಿತು.
ಇನ್ನು ಈ ಬಗ್ಗೆ ಹುಬ್ಬಳ್ಳಿಯ ಸಾರಿಗೆ ಇಲಾಖೆಯ ಹಿರಿಯ ಅಧಿಕಾರಿಗಳಿಗೆ ಪಿಎಸೈ ಎನ್.ಡಿ.ಜಕ್ಕಣ್ಣವರ ಕರೆ ಮಾಡಿ, ಪರಿಸ್ಥಿತಿಯ ಕುರಿತು ತಿಳಿಸಿದರು. ಸಾರಿಗೆ ಅಧಿಕಾರಿಗಳು ಒಂದು ವಾರದೊಳಗೆ ಬಸ್ಸಿನ ವ್ಯವಸ್ಥೆ ಮಾಡಿಕೊಡುತ್ತೇನೆ ಎಂದು ತಿಳಿಸಿದ ನಂತರ, ಅಷ್ಟರಲ್ಲೇ ಸ್ಥಳಕ್ಕೆ ಬಂದಿದ್ದ ಸಾರಿಗೆ ಅಧಿಕಾರಿಯೂ ಒಂದು ವಾರದೊಳಗೆ ಬಸ್ಸಿನ ವ್ಯವಸ್ಥೆ ಮಾಡಿಕೊಡುವುದಾಗಿ ಹೇಳಿದ ಬಳಿಕ ಪ್ರತಿಭಟನೆ ಕೈಬಿಡಲಾಯಿತು. ಪಿಐ ಎಸ್.ಎಸ್.ಸಿಮಾನಿ ನೇತೃತ್ವದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು.