ಅಂಕೋಲಾ: ಶಿಕ್ಷಣ ವ್ಯಕ್ತಿಯನ್ನು ಸಂಸ್ಕಾರಯುತನ್ನಾಗಿಸುತ್ತದೆ.ಒಬ್ಬ ವ್ಯಕ್ತಿಯ ಮಾನಸಿಕ, ಬೌದ್ಧಿಕ, ಶಾರೀರಿಕ ಬೆಳವಣಿಗೆಯಲ್ಲಿ ಶಿಕ್ಷಣ ಪ್ರಮುಖ ಪಾತ್ರ ವಹಿಸುತ್ತದೆ. ಅದು ವೃತ್ತಿ ಶಿಕ್ಷಣ ಇರಲಿ ಯಾವುದೇ ಇರಲಿ ಅಲ್ಲಿ ನಮಗೆ ಸಿಗುವುದು ಜ್ಞಾನವೇ ಹೊರತೂ ಇನ್ನೇನಲ್ಲ. ವಿದ್ಯಾರ್ಥಿಗಳು ಸಾಮಾಜಿಕ ಜಾಲತಾಣಗಳ ಉಪಯೋಗ ಪಡೆದುಕೊಳ್ಳಬೇಕೇ ಹೊರತು ಅದರ ಭ್ರಮೆಯಲ್ಲಿ ಬದುಕಿದರೆ ಮುಂದೆ ಬಹುದೊಡ್ಡ ಪರಿಣಾಮವನ್ನು ಎದುರಿಸಬೇಕಾಗುತ್ತದೆ ಎಂದು ಪಿ.ಎಂ.ಪ.ಪೂ ಕಾಲೇಜಿನ ಪ್ರಭಾರಿ ಪ್ರಾಚಾರ್ಯ ಫಾಲ್ಗುಣ ಗೌಡ ಹೇಳಿದರು.
ಅವರು ನಗರದ ಸರಕಾರಿ ಕೈಗಾರಿಕಾ ತರಬೇತಿ ಸಂಸ್ಥೆ ಅಂಕೋಲಾ ಮತ್ತು ಯಲ್ಲಾಪುರ ಶಾಖೆಯ ರಾಷ್ಟ್ರೀಯ ವೃತ್ತಿ ಪ್ರಮಾಣ ಪತ್ರ ವಿತರಣೆಯ ಘಟಿಕೋತ್ಸವ ಉದ್ಘಾಟಿಸಿ ಮಾತನಾಡಿದರು. ಸಂಸ್ಥೆಯ ಪ್ರಿನ್ಸಿಪಾಲ್ ಶಾಂತಾರಾಮ ನಾಯಕ ಅಧ್ಯಕ್ಷತೆ ವಹಿಸಿದ್ದರು. ಸಂಸ್ಥೆಯ ಆಡಳಿತಾಧಿಕಾರಿ ರಾಜೇಂದ್ರ ಕುವಾಳೆಕರ್,ತರಬೇತಿ ಅಧಿಕಾರಿಗಳಾದ ದೀಪಕ ಗಾಂವಕರ, ಪ್ರಕಾಶ ಕುಡಾಲಕರ್, ಅಜೀಜ ಜಮಾದಾರ ಮಾತನಾಡಿದರು.
ರೀತು ಮಹಾಲೆ ಪ್ರಾರ್ಥಿಸಿದರು. ಸಂಜಯ ರಾಣೆ ವಂದಿಸಿದರು. ಕೃಷ್ಣ ನಾಯ್ಕ ಕಾರ್ಯಕ್ರಮ ನಿರೂಪಿಸಿದರು. ಇದೇ ಸಂದರ್ಭದಲ್ಲಿ ವಿದ್ಯಾರ್ಥಿಗಳಿಗೆ ರಾಷ್ಟ್ರೀಯ ವೃತ್ತಿ ಪ್ರಮಾಣ ಪತ್ರ ನೀಡಲಾಯಿತು.