ಗೋಕರ್ಣ: ಹನೇಹಳ್ಳಿ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಸ.ಹಿ.ಪ್ರಾ ಶಾಲೆ ಹೊಸ್ಕೇರಿ ಕಡಿಮೆಯಲ್ಲಿ ನಡೆಯಿತು. ಕಿರಿಯರ ವಿಭಾಗದಲ್ಲಿ ಒಟ್ಟು 14 ಹಾಗೂ ಹಿರಿಯರ ವಿಭಾಗದಲ್ಲಿ 19 ಸ್ಪರ್ಧೆಗಳನ್ನು ನಡೆಸಲಾಯಿತು. ಸ್ಪರ್ಧೆಯಲ್ಲಿ ಭಾಗವಹಿಸಿ ವಿಜೇತರಾದ ವಿದ್ಯಾರ್ಥಿಗಳಿಗೆ ಹನೇಹಳ್ಳಿ ಗ್ರಾಮ ಪಂಚಾಯತ ಅಧ್ಯಕ್ಷೆ ಭಾರತಿ ಗೌಡ ಬಹುಮಾನ ವಿತರಿಸಿದರು.
ಬೆಳಿಗ್ಗೆ ನಡೆದ ಉದ್ಘಾಟನಾ ಸಮಾರಂಭದಲ್ಲಿ ಹಾಜರಿದ್ದು ದೀಪ ಬೆಳಗಿಸುವುದರ ಮೂಲಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಆರ್.ಎಲ್.ಭಟ್ ಕಾರ್ಯಕ್ರಮವನ್ನು ಉತ್ತಮ ರೀತಿಯಲ್ಲಿ ಸಂಘಟಿಸಿ ಆಯೋಜಿಸಿದ ಸಂಘಟಕರ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಮಕ್ಕಳ ಪ್ರತಿಭೆಗೆ ಇದೊಂದು ಉತ್ತಮ ವೇದಿಕೆಯಾಗಿದ್ದು ಮಕ್ಕಳ ಭಾಗವಹಿಸುವಿಕೆಗೆ ಪಾಲಕರು ಪ್ರೋತ್ಸಾಹಿಸಬೇಕು ಎಂದರು. ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಸಮನ್ವಯಾಧಿಕಾರಿ ರೇಖಾ ನಾಯ್ಕರವರು ಕಾರ್ಯಕ್ರಮದ ಔಚಿತ್ಯದ ಕುರಿತು ನಮ್ಮ ಅನಿಸಿಕೆ ವ್ಯಕ್ತಪಡಿಸುತ್ತ ಭಾಗವಹಿಸುವ ಎಲ್ಲಾ ಮಕ್ಕಳಿಗೆ ಶುಭ ಕೋರಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ನಾಡುಮಾಸ್ಕೇರಿ ಗ್ರಾಮಪಂಚಾಯತ ಅಧ್ಯಕ್ಷೆ ಧನಶ್ರೀ ಅಂಕೋಲೆಕರ ಕಾರ್ಯಕ್ರಮದ ಬಗ್ಗೆ ಹರ್ಷ ವ್ಯಕ್ತಪಡಿಸಿ ಶುಭ ಹಾರೈಸಿದರು.
ಇದೇ ಸಂದರ್ಭದಲ್ಲಿ ಹಿಂದಿನ ಸಿಆರ್‌ಪಿ ಆರ್.ಟಿ.ಗೌಡರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಉತ್ತರಕನ್ನಡ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಆನಂದು ಬಿ.ಗಾಂವಕರ, ತಾಲೂಕಾಧ್ಯಕ್ಷ ರವೀಂದ್ರ ಭಟ್ಟ ಸೂರಿ, ಸದಸ್ಯ ಪ್ರಹ್ಲಾದ್ ಮಾಸ್ಕೇರಿ, ಶಾಲಾ ಎಸ್‌ಡಿಎಮ್‌ಸಿ ಅಧ್ಯಕ್ಷ ಸುಕ್ರು ಗೌಡ, ಬಿಆರ್‌ಪಿ ವಿನೋದ ನಾಯಕ, ಇಸಿಓ ದೀಪಾ ಕಾಮತ, ಇಸಿಓ ಉಮೇಶ ನಾಯ್ಕ, ಶಾಲಾ ಮುಖ್ಯಾಧ್ಯಾಪಕಿ ವಿದ್ಯಾ ಡಿ.ನಾಯಕ ಹಾಜರಿದ್ದರು. ಹನೇಹಳ್ಳಿ ಸಿ.ಆರ್.ಪಿ ಮಂಜುಳಾ ನಾಯ್ಕ ಪ್ರಾಸ್ತಾವಿಕ ಮಾತುಗಳೊಂದಿಗೆ ಸ್ವಾಗತಿಸಿದರು. ಶಿಕ್ಷಕಿ ವೈಶಾಲಿ ನಾಯಕ ಕಾರ್ಯಕ್ರಮ ನಿರೂಪಿಸಿದರು. ಶಿಕ್ಷಕ ಆನಂದ ಕೆ.ನಾಯ್ಕ ವಂದಿಸಿದರು.