ಹೊನ್ನಾವರ; ವಿದ್ಯಾರ್ಥಿಗಳ ಕ್ರೀಡೆಗೆ ಪೊತ್ಸಾಹ ನೀಡಲು ಶಾಲೆಗಳಿಗೆ ಕ್ರೀಡಾಕೂಟಗಳ ಸಂಘಟನೆಗೆ ಅನುದಾನ ಸಾಲುತ್ತಿಲ್ಲ. ಅನುದಾನ ಹೆಚ್ಚಿಸುವಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಗಮನಕ್ಕೆ ತರುವುದಾಗಿ ಶಾಸಕ ದಿನಕರ ಶೆಟ್ಟಿ ಹೇಳಿದರು.
ಪಟ್ಟಣದ ಎಸ್.ಡಿ.ಎಂ. ಕ್ರೀಡಾಂಗಣದಲ್ಲಿ ಶನಿವಾರ ನಡೆದ ತಾಲೂಕಾ ಮಟ್ಟದ ಪ್ರೌಢಶಾಲೆಗಳ ಇಲಾಖಾ ಕ್ರೀಡಾಕೂಟವನ್ನು ಉದ್ಘಾಟಿಸಿ
ಅವರು ಮಾತನಾಡಿದರು. ಈ ಹಿಂದೆ ಅತಿಥಿ ಶಿಕ್ಷಕರಿಗೆ ಏಳುವರೆ ಸಾವಿರ ರೂ. ವೇತನ ಕೊಡುತ್ತಿದ್ದರು. ಇದನ್ನು ಮುಖ್ಯಮಂತ್ರಿ ಬಸವರಾಜ
ಬೊಮ್ಮಾಯಿ ಅವರ ಗಮನಕ್ಕೆ ತಂದಿದ್ದೆ. ನಂತರ ಅದನ್ನು ಹೆಚ್ಚಿಗೆ ಮಾಡಿದ್ದಾರೆ ಎಂದು ಹೇಳಿದರು. ಶಾಲೆಗಳಲ್ಲಿ ಅಥ್ಲೆಟಿಕ್ ಮಾದರಿಯ ಕ್ರೀಡಾಕೂಟಗಳನ್ನು ಹೆಚ್ಚು ಸಂಘಟಿಸಬೇಕು. ಕ್ರೀಡಾಪಟುಗಳು ರಾಷ್ಟ್ರ,ಅಂತರರಾಷ್ಟ್ರ ಮಟ್ಟಕ್ಕೆ ಬೆಳೆಯಬೇಕು ಎಂದರು.
ಪಟ್ಟಣ ಪಂಚಾಯಿತಿ ಅಧ್ಯಕ್ಷ ಶಿವರಾಜ ಮೇಸ್ತ ಅಧ್ಯಕ್ಷತೆ ವಹಿಸಿ ಮಾತನಾಡಿ ಶಾಲಾ ಕ್ರೀಡಾಕೂಟಗಳು ಕ್ರೀಡೆಯಲ್ಲಿ ಬೆಳೆಯಬೇಕೆಂಬ ಆಸಕ್ತಿ ಇದ್ದವರಿಗೆ ಪ್ರಾಥಮಿಕ ಹಂತದ ವೇದಿಕೆಗಳಾಗಿವೆ. ಆದ್ದರಿಂದ ಇಂಥ ಕ್ರೀಡಾಕೂಟಗಳಲ್ಲಿ ಹೆಚ್ಚು ಹೆಚ್ಚು ಭಾಗವಹಿಸಬೇಕು ಎಂದರು.
ವೇದಿಕೆಯಲ್ಲಿ ಬಿಜೆಪಿ ಹೊನ್ನಾವರ ಮಂಡಲದ ಅಧ್ಯಕ್ಷ ರಾಜೇಶ ಭಂಡಾರಿ, ಕಡ್ಲೆ ಗ್ರಾ.ಪಂ. ಅಧ್ಯಕ್ಷ ಗೋವಿಂದ ಗೌಡ, ಶಿಕ್ಷಕರ ಸಂಘಟನೆಗಳ ಎಲ್.ಎಂ.ಹೆಗಡೆ, ಆರ್.ಟಿ. ನಾಯ್ಕ, ಎಂ.ಜಿ. ನಾಯ್ಕ, ಸಾಧನಾ ಬರ್ಗಿ ಸತೀಶ ನಾಯ್ಕ ಮತ್ತಿತರರು ಉಪಸ್ಥಿತರಿದ್ದರು.
ಕ್ಷೇತ್ರ ಶಿಕ್ಷಣಾಧಿಕಾರಿ ಜಿ.ಎಸ್. ನಾಯ್ಕ ಸ್ವಾಗತಿಸಿದರು. ಕ್ರೀಡಾಕೂಟದಲ್ಲಿ ತಾಲೂಕಿನ ವಿವಿಧ ಪ್ರೌಢಶಾಲೆಗಳ ಕ್ರೀಡಾಪಟುಗಳು ಭಾಗವಹಿಸಿದ್ದರು.