ಕಾರವಾರ: ಒಂದೇ ದಿನದಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣ ಕಷ್ಟ ಆದರೆ, ನಿಶ್ಚಯವಾಗಿಯೂ ಉತ್ತರ ಕನ್ನಡ ಜಿಲ್ಲೆಯಲ್ಲಿ ಆಸ್ಪತ್ರೆ ನಿರ್ಮಾಣಕ್ಕೆ ಬದ್ಧರಾಗಿದ್ದೇವೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದ್ದಾರೆ.
ಆರ್ಥಿಕ ಇಲಾಖೆಯಿಂದ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣ ಪ್ರಸ್ತಾವನೆ ತಿರಸ್ಕರಿಸಿರುವ ಬಗ್ಗೆ ಸ್ಪಂದಿಸಿ, ನಾವು ಮುಖ್ಯಮಂತ್ರಿ ಹಾಗೂ ಆರೋಗ್ಯ ಸಚಿವರ ಜತೆ ಸಂಪರ್ಕದಲ್ಲಿದ್ದೇವೆ. ಖಾಸಗಿ ಆಸ್ಪತ್ರೆಯಲ್ಲಿ ಸೇವೆ ನೀಡುವುದಾದಲ್ಲಿ ಅದಕ್ಕೆ ಬೇಕಾದ ಭೂಮಿ, ಹಣಕಾಸು, ರಸ್ತೆ, ನೀರು ಒದಗಿಸುವುದಾಗಿಯೂ ಅವರು ತಿಳಿಸಿದ್ದಾರೆ. ಅಧಿವೇಶನ ಮುಗಿದ ಬಳಿಕ ಮುಖ್ಯಮಂತ್ರಿ ಉತ್ತರಕನ್ನಡ ಜಿಲ್ಲೆಗೆ ಭೇಟಿ ನೀಡಿ ವಿವಿಧ ಯೋಜನೆಗಳಿಗೆ ಚಾಲನೆ ನೀಡುತ್ತಾರೆ. ಆಗ ಅವರ ಗಮನಕ್ಕೆ ತರಲಾಗುತ್ತದೆ.
ಒಂದೇ ಬಾರಿಗೆ ಅರ್ಥಿಕ ಇಲಾಖೆ ಯೋಜನೆಗೆ ಸಮ್ಮತಿ ನೀಡುವುದಿಲ್ಲ, ಹಾಗಂತ ನಾವು ಯೋಜನೆಯನ್ನು ಬಿಡಲೂ ಆಗುವುದಿಲ್ಲ, ಆರ್ಥಿಕ ಇಲಾಖೆಯನ್ನು ಒಪ್ಪಿಸುವವರೆಗೂ ಮುಖ್ಯಮಂತ್ರಿಗಳನ್ನು ಕಾಡುವುದು ಜನಪ್ರತಿನಿಧಿಗಳ ಜವಾಬ್ದಾರಿ. ಆಸತ್ರೆ ನಿರ್ಮಾಣ ಕುರಿತಂತೆ ಜಿಲ್ಲೆಯ ಎಲ್ಲ ಶಾಸಕರು ಸಿಎಂ ಜತೆ ಮಾತನಾಡಿದ್ದಾರೆ. ಎಲ್ಲರ ಧ್ವನಿಯಾಗಿ ಶಾಸಕಿ ರೂಪಾಲಿ ಸದನದಲ್ಲಿ ಆಸ್ಪತ್ರೆ ಬೇಡಿಕೆ ಇಟ್ಟಿದ್ದಾರೆ ಎಂದು ತಿಳಿಸಿದರು.