ಕಾರವಾರ: ಗ್ರಾಮ ಪಂಚಾಯತ್‌ಗಳಲ್ಲಿರುವ 231 ಗ್ರಾಮ್ ಒನ್ ಕೇಂದ್ರಗಳಲ್ಲಿ ಉಚಿತವಾಗಿ ಕೋ- ಬ್ರಾಂಡೆಡ್ ಆರೋಗ್ಯ ಕಾರ್ಡ್ಗಳನ್ನು ವಿತರಿಸಲಾಗುತ್ತಿದೆ. ಮುಂದಿನ 3 ತಿಂಗಳಲ್ಲಿ ಜಿಲ್ಲೆಯ 12 ಲಕ್ಷ 38 ಸಾವಿರ ಮಂದಿ ಕಾರ್ಡ್ ವಿತರಿಸುವ ಗುರಿಯನ್ನು ಆರೋಗ್ಯ ಇಲಾಖೆ ಹೊಂದಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.
ಬಿಪಿಎಲ್ ಹಾಗೂ ಎಪಿಎಲ್ ಕಾರ್ಡ್’ದಾರರು ಸರ್ಕಾರದಿಂದ ಉಚಿತವಾಗಿ ಆರೋಗ್ಯ ಸೇವೆ ಪಡೆಯಲು ಇನ್ನು ಮುಂದೆ ಆಯುಷ್ಮಾನ್ ಭಾರತ್ ಪ್ರಧಾನಮಂತ್ರಿ ಜನ ಆರೋಗ್ಯ ಯೋಜನೆಯ ಕೋ ಬ್ರಾಂಡೆಡ್ ಕಾರ್ಡ್ ಪಡೆದುಕೊಳ್ಳಬೇಕಿದೆ. ಆಯುಷ್ಮಾನ್ ಭಾರತ್ ಹೆಲ್ತ್ ಅಕೌಂಟ್ ನಂಬರ್ ಹಾಗೂ ಆರೋಗ್ಯ ಕರ್ನಾಟಕ ಯೋಜನೆಯ ಸೌಲಭ್ಯ ಎರಡನ್ನೂ ಒಟ್ಟಾಗಿ ಸೇರಿಸಲಾಗಿರುವ ಆಯುಷ್ಮಾನ್ ಭಾರತ್ ಪ್ರಧಾನಮಂತ್ರಿ ಜನ ಆರೋಗ್ಯ ಯೋಜನೆ ಕೋ- ಬ್ರಾಂಡೆಡ್ ಕಾರ್ಡ್ ವಿತರಿಸುವ ಕಾರ್ಯ ಕಳೆದ ಎರಡು ವಾರದಿಂದ ಜಿಲ್ಲೆಯಾದ್ಯಂತ ಆರಂಭವಾಗಿದೆ ಎಂದು ತಿಳಿಸಿದ್ದಾರೆ.
ನೋಂದಣಿ ಹೇಗೆ?: ಆಯುಷ್ಮಾನ್ ಭಾರತ್ ಪ್ರಧಾನಮಂತ್ರಿ ಜನ ಆರೋಗ್ಯ ಯೋಜನೆ ಕೋ ಬ್ರಾಂಡೆಡ್ ಕಾರ್ಡ್ ಪಡೆದುಕೊಂಡಲ್ಲಿ ಅದರೊಂದಿಗೆ ಆಭಾ ನೋಂದಣಿ ಮಾಡಲಾಗುತ್ತದೆ. ಆರೋಗ್ಯ ಸೇವೆ ಪಡೆಯುವವರು ಹಾಗೂ ನೀಡುವ ಸರ್ಕಾರಿ ಖಾಸಗಿ ಆಸ್ಪತ್ರೆಗಳು, ಆರೋಗ್ಯ ಕ್ಷೇತ್ರದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ವೈದ್ಯರು, ಪ್ಯಾರಾ ಮೆಡಿಕಲ್ ಸಿಬ್ಬಂದಿಯನ್ನು ಡಿಜಿಟಲ್ ವ್ಯವಸ್ಥೆಗೆ ತರುವುದೇ ಆಬಾ ನೋಂದಣಿಯಾಗಿರುತ್ತದೆ. ನೋಂದಣಿಯಾದ ವ್ಯಕ್ತಿಗೆ ಯಾವುದೇ ಚಿಕಿತ್ಸೆ ನೀಡುವ ಸಂದರ್ಭದಲ್ಲಿ ಮಾಹಿತಿ ದಾಖಲಿಸಲಾಗುತ್ತದೆ. ಮುಂದಿನ ದಿನಗಳಲ್ಲಿ ಇದರ ಆಧಾರದ ಮೇಲೆ ಜೀವನ ಪರ್ಯಂತ ಚಿಕಿತ್ಸೆ ಮುಂದುವರಿಯುತ್ತದೆ. ಇದಲ್ಲದೇ ದೇಶದ ಯಾವುದೇ ಮೂಲೆಯಲ್ಲಿದ್ದರು ಅಗತ್ಯ ವೈದ್ಯರು, ಆಸ್ಪತ್ರೆಯ ಸೇವೆ ಪಡೆಯಬಹುದಾಗಿದೆ.
ಪ್ರಯೋಜನವೇನು?: ಬಿಪಿಎಲ್ ಕಾರ್ಡ್’ದಾರರಿಗೆ ಸರ್ಕಾರಿ ಹಾಗೂ ನೋಂದಾಯಿತ ಖಾಸಗಿ ಆಸ್ಪತ್ರೆಗಳಲ್ಲಿ 5 ಲಕ್ಷ ರೂಪಾಯಿ ಹಾಗೂ ಎ.ಪಿ.ಎಲ್ ಕಾರ್ಡ್’ದಾರರಿಗೆ 1.5 ಲಕ್ಷ (ಶೇ 30%ರಷ್ಟು) ರೂಪಾಯಿವರೆಗೆ ಚಿಕಿತ್ಸೆಯನ್ನು ಸರ್ಕಾರದಿಂದ ಉಚಿತವಾಗಿ ನಿಡಲಾಗುತ್ತದೆ. ಆಯುಷ್ಮಾನ್ ಭಾರತ್ ಆರೋಗ್ಯ ಕರ್ನಾಟಕ ಯೋಜನೆಯಡಿ ಈ ಸೇವೆಯನ್ನು ಈವರೆಗೆ ನೀಡಲಾಗುತ್ತಿತ್ತು. ಈಗ ಅದನ್ನು ಎಬಿ- ಎಆರ್‌ಕೆ ಇಂದ ಎಬಿ-ಪಿಎಂಜಿಎವೈ ಕಾರ್ಡ್ ಎಂದು ಬದಲಿಸಿ ಪಿವಿಸಿ ಸ್ಮಾರ್ಟ್ ಕಾರ್ಡ್ಗಳನ್ನು ಗ್ರಾಮ್ ಒನ್ ಕೇಂದ್ರಗಳಲ್ಲಿಯೇ ದಾಖಲಿಸಿ ನೀಡಲಾಗುತ್ತದೆ. ಈ ಸ್ಮಾರ್ಟ್ ಕಾರ್ಡ್ಗಳನ್ನು ಎ.ಟಿ.ಎಮ್ ಮಾದರಿಯಲ್ಲಿಯೇ ಉಪಯೋಗಿಸಲು ಅನುಕೂಲವಾಗುತ್ತದೆ.
ದಾಖಲಾತಿಗಳೇನೇನು ಬೇಕು?: ಪೋನ್ ನಂಬರ್ ಲಿಂಕ್ ಆಗಿರುವ ಆಧಾರ್ ಕಾರ್ಡ್, ರೇಷನ್ ಕಾರ್ಡ್ ಬೇಕು. ಒಂದು ವೇಳೆ ಲಿಂಕ್ ಆಗಿರದಿದ್ದರೆ ಕಾರ್ಡ್ ಮಾಡಿಸಬೇಕಿರುವವರು ನೇರವಾಗಿ ಬಂದು ಫಿಂಗರ್ ಪ್ರಿಂಟ್, ಐರೀಸ್ ಸ್ಕ್ಯಾನ್ ಮಾಡಿಸಿ ಕಾರ್ಡ್ ಪಡೆದುಕೊಳ್ಳಬಹುದು.