ಕುಮಟಾ: ತಾಲೂಕಿನ ಮೊರಬಾದಿಂದ ಬೆಟ್ಕುಳಿಯವರೆಗಿನ ಖಾರ್‌ಲ್ಯಾಂಡ್ ನಿರ್ಮಾಣಕ್ಕೆ ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಇಲಾಖೆಯಿಂದ ಮಂಜೂರಾದ 4.24 ಕೋಟಿ ರೂ. ಕಾಮಗಾರಿಗೆ ಶಾಸಕ ದಿನಕರ ಶೆಟ್ಟಿ ಚಾಲನೆ ನೀಡಿದರು.
ನಂತರ ಮಾತನಾಡಿದ ಶಾಸಕರು, ಈ ಭಾಗದ ಮೀನುಗಾರರು ಮತ್ತು ರೈತರು ಖಾರ್‌ಲ್ಯಾಂಡ್ ನಿರ್ಮಾಣಕ್ಕೆ ಹಲವು ವರ್ಷಗಳಿಂದ ಬೇಡಿಕೆ ಸಲ್ಲಿಸಿದ್ದರು. ಈ ಬಗ್ಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ಸಣ್ಣ ನೀರಾವರಿ ಸಚಿವ ಮಾಧುಸ್ವಾಮಿ ಅವರನ್ನು ಭೇಟಿಯಾಗಿ ವಿನಂತಿಸಿದ್ದೆ. ತಕ್ಷಣ ಕ್ಷೇತ್ರಕ್ಕೆ 100 ಕೋಟಿ ರೂ. ಅನುದಾನ ನೀಡಿದರು. ಅವರಿಗೆ ಕ್ಷೇತ್ರದ ಶಾಸಕನಾಗಿ ಅಭಿನಂದನೆ ಸಲ್ಲಿಸುತ್ತೇನೆ. ದಿ.ರಾಮಕೃಷ್ಣ ಹೆಗಡೆ ಆರ್ಥಿಕ ಸಚಿವರಾಗಿದ್ದ ಸಂದರ್ಭದಲ್ಲಿ ರೈತರ ಕಷ್ಟವನ್ನು ಹತ್ತಿರದಿಂದ ಗಮನಿಸಿ, ಈ ಭಾಗಕ್ಕೆ ಖಾರ್‌ಲ್ಯಾಂಡ್ ಮಜೂರಿ ಮಾಡಿಸಿದ್ದರು. ಆನಂತರ ಯಾವುದೇ ಸರ್ಕಾರ ಖಾರ್‌ಲ್ಯಾಂಡ್ ನಿರ್ಮಾಣಕ್ಕೆ ಅನುದಾನ ನೀಡಿಲ್ಲ ಎಂದರು.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ನಿಕಟಪೂರ್ವ ಮುಖ್ಯಮಂತ್ರಿ ಯಡಿಯೂರಪ್ಪ ನೇತೃತ್ವದ ರಾಜ್ಯದ ಬಿಜೆಪಿ ಸರ್ಕಾರ ಅನುದಾನ ನೀಡಿದೆ. ನಾನು ಶಾಸಕನಾಗಿ ಆಯ್ಕೆಯಾದ ಬಳಿಕ ಬೆಟ್ಕುಳಿ ಭಾಗದಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯಗಳನ್ನು ನೆರವೇರಿಸಿದ್ದೇನೆ. ಅಭಿವೃದ್ಧಿ ವಿಷಯದಲ್ಲಿ ಯಾವುದೇ ಕಾರಣಕ್ಕೂ ರಾಜಕೀಯ ಮಾಡಬಾರದು. ಒಟ್ಟಾರೆಯಾಗಿ ಕ್ಷೇತ್ರದ ಅಭಿವೃದ್ಧಿಗೆ ಕೈಜೋಡಿಸಬೇಕು ಎಂದ ಅವರು, ಕೇಂದ್ರ ಹಾಗೂ ರಾಜ್ಯದ ಬಿಜೆಪಿ ಸರ್ಕಾರಗಳು ಶಿಕ್ಷಕ ಮತ್ತು ಆರೋಗ್ಯ ಕ್ಷೇತ್ರಕ್ಕೆ ಸಾಕಷ್ಟು ಅನುದಾನ ನೀಡುತ್ತಿದೆ. ಮೀನುಗಾರರ ಮಕ್ಕಳು ಉತ್ತಮ ಗುಣಮಟ್ಟದ ಶಿಕ್ಷಣ ಪಡೆದು ಉನ್ನತ ಹುದ್ದೆಗಳನ್ನು ಅಲಂಕರಿಸಬೇಕು ಎಂದರು.
ಊರಿನ ಮುಖಂಡ ಬೀರಪ್ಪ ಗೌಡ ಮಾತನಾಡಿ, ಶಾಸಕ ದಿನಕರ ಶೆಟ್ಟಿ ಅವರ ಬಳಿ ವಿವಿಧ ರಸ್ತೆ ಅಭಿವೃದ್ಧಿಗೆ ಬೇಡಿಕೆ ಸಲ್ಲಿಸಿದ ತಕ್ಷಣ 40 ಲಕ್ಷ ರೂ. ಅನುದಾನ ನೀಡಿದ್ದಾರೆ. ಮಳೆ ಸುರಿಯುತ್ತಿರುವ ಕಾರಣ ವಿಳಂಭವಾಗಿದೆ. ಮಳೆ ಕಡಿಮೆಯಾದ ತಕ್ಷಣ ಕಾಮಗಾರಿ ಆರಂಭಿಸಲು ಅಧಿಕಾರಿಗಳಿಗೆ ಸೂಚನೆ ನೀಡುತ್ತೇನೆ ಎಂದಿದ್ದಾರೆ. ಖಾರ್‌ಲ್ಯಾಂಡ್ ನಿರ್ಮಾಣದಿಂದ ರೈತರಿಗೆ ಹಾಗೂ ಮೀನುಗಾರರಿಗೆ ಬಹಳಷ್ಟು ಅನುಕೂಲವಾಗಲಿದೆ. ಚುನಾವಣೆ ಸಮಯದಲ್ಲಿ ನಾವೆಲ್ಲರೂ ದಿನಕರ ಶೆಟ್ಟಿ ಬೆಂಬಲಿಗರಾಗಿ ನಿಲ್ಲಬೇಕಿದೆ ಎಂದರು.
ಕಾರ್ಯಕ್ರಮದಲ್ಲಿ ಹಿರೇಗುತ್ತಿ ಗ್ರಾ.ಪಂ ಅಧ್ಯಕ್ಷೆ ನಾಗರತ್ನಾ ಗಾಂವ್ಕರ, ಬರ್ಗಿ ಗ್ರಾ.ಪಂ ಅಧ್ಯಕ್ಷೆ ವಿಶಾಲಾಕ್ಷಿ ಪಟಗಾರ, ಉಪಾಧ್ಯಕ್ಷೆ ಪಾರ್ವತಿ ಹರಿಕಾಂತ, ಸಣ್ಣ ನೀರಾವರಿ ಇಲಾಖೆಯ ಅಭಿಯಂತರೆ ಅಮಿತಾ ತಳೇಕರ, ಗ್ರಾ.ಪಂ ಸದಸ್ಯರು ಸೇರಿದಂತೆ ನೂರಾರು ಗ್ರಾಮಸ್ಥರು ಮತ್ತಿತರರು ಉಪಸ್ಥಿತರಿದ್ದರು.