ಯಲ್ಲಾಪುರ : ರಚನಾತ್ಮಕ ಸ್ಪರ್ಧಾ ಕಾರ್ಯಕ್ರಮಗಳಿಂದ ಮಕ್ಕಳ ಸರ್ವಾಂಗೀಣ ಅಭಿವೃದ್ಧಿ ಸಾಧ್ಯವಿದೆ. ಈ ನಿಟ್ಟಿನಲ್ಲಿ ಉತ್ತರಕನ್ನಡ ಜಿಲ್ಲಾ ಮಟ್ಟದ ಮುದ್ದು ಕೃಷ್ಣ ವೇಷ ಫೋಟೋ ಸ್ಪರ್ಧೆಯನ್ನು ಆಯೋಜಿಸಿ, ಸ್ಪರ್ಧಾ ವಿಜೇತರಾದ ಮಕ್ಕಳಿಗೆ ಬಹುಮಾನ ವಿತರಿಸಿರುವುದು ಶ್ಲಾಘನೀಯವಾಗಿದೆ ಎಂದು ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ್ ಮೆಚ್ಚುಗೆ ವ್ಯಕ್ತಪಡಿಸಿದರು.
ಸುಜ್ಞಾನ ಸೇವಾ ಫೌಂಡೇಶನ್, ಇ-ಯಲ್ಲಾಪುರ ಡಿಜಿಟಲ್ ನ್ಯೂಸ್ ವತಿಯಿಂದ ರಂಗ ಸಹ್ಯಾದ್ರಿ ಹಾಗೂ ಗೌತಮ್ ಜುವೆಲ್ಲರ‍್ಸ್ ಸಹಕಾರದಿಂದ ನಡೆದ ಜಿಲ್ಲಾ ಮಟ್ಟದ ಮುದ್ದುಕೃಷ್ಣವೇಷ ಫೋಟೋ ಸ್ಪರ್ಧೆಯಲ್ಲಿ ವಿಜೇತರಾದ ಮಕ್ಕಳಿಗೆ ಯಲ್ಲಾಪುರ ಪಟ್ಟಣದ ಸಾಹಿತ್ಯ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಬಹುಮಾನ ವಿತರಿಸಿ, ಸುಜ್ಞಾನ ಫೌಂಡೇಶನ್ (ರಿ) ಲೋಗೋ ಅನಾವರಣಗೊಳಿಸಿ ಮಾತನಾಡಿದರು. ಈ ಸಂಘಟನೆಗಳಿಂದ ಇನ್ನಷ್ಟು ಇಂತಹ ಸಮಾಜಮುಖಿ ಕಾರ್ಯಗಳು ನಡೆಯುವಂತಾಗಲಿ ಎಂದು ಶುಭ ಹಾರೈಸಿದರು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಮಾಜಿ ಶಾಸಕ ವಿ.ಎಸ್.ಪಾಟೀಲ್ ಮಾತನಾಡಿ, ಇಂತಹ ಸ್ಪರ್ಧಾ ಕಾರ್ಯಕ್ರಮಗಳ ಮೂಲಕ ಮಕ್ಕಳಿಗೆ ಭಾರತೀಯ ಸಂಸ್ಕೃತಿಯ ಮಹತ್ವವನ್ನು ತಿಳಿಸಿಕೊಡುವ ಕೆಲಸವಾಗುತ್ತಿರುವುದು ಸಂತಸದ ವಿಷಯವಾಗಿದೆ. ಮಕ್ಕಳ ಪ್ರತಿಭೆ ಬೆಳಕಿಗೆ ಬರಲು ಇಂತಹ ಸ್ಪರ್ಧೆಗಳು ಸಹಕಾರಿಯಾಗುತ್ತವೆ ಎಂದರು.
ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದ ಪಂಚಾಯತ್ ರಾಜ್ ವಿಕೇಂದ್ರೀಕರಣ ಯೋಜನೆಯ ಉಪಾಧ್ಯಕ್ಷ ಪ್ರಮೋದ ಹೆಗಡೆ ಮಾತನಾಡಿ, ಜೀವನದಲ್ಲಿ ನಿತ್ಯ ಚೈತನ್ಯವನ್ನು ತುಂಬಲು, ಕ್ರಿಯಾಶೀಲವಾಗಿರಲು ಇಂತಹ ಕಾರ್ಯಕ್ರಮಗಳು ಅಗತ್ಯವಾಗಿವೆ. ಜಿಲ್ಲೆಯ ವಿವಿಧ ತಾಲೂಕುಗಳಿಂದ ದೊಡ್ಡ ಸಂಖ್ಯೆಯಲ್ಲಿ ಮಕ್ಕಳು ಈ ಸ್ಪರ್ಧೆಯಲ್ಲಿ ಭಾಗವಹಿಸಿರುವುದು ಗಮನಾರ್ಹ ಸಂಗತಿಯಾಗಿದೆ ಎಂದರು. ಇನ್ನೋರ್ವ ಮುಖ್ಯ ಅತಿಥಿ ಪಟ್ಟಣ ಪಂಚಾಯತಿ ಅಧ್ಯಕ್ಷೆ ಸುನಂದಾ ದಾಸ್ ಮಾತನಾಡಿ, ಮಕ್ಕಳಿಗೆ ಉತ್ತಮ ಸಂಸ್ಕಾರವನ್ನು ಕಲಿಸುವ ಮೂಲಕ ಉತ್ತಮ ಬದುಕನ್ನು ರೂಪಿಸಬೇಕು. ಇತಿಮಿತಿಯಲ್ಲಿ ಮೊಬೈಲ್ ಬಳಕೆ ಮಾಡುವ ಕುರಿತು ತಿಳುವಳಿಕೆ ನೀಡಬೇಕು. ಇಂತಹ ಕಾರ್ಯಕ್ರಮಗಳು ಇನ್ನಷ್ಟು ನಡೆಯಲಿ ಎಂದರು.ಅಧ್ಯಕ್ಷತೆ ವಹಿಸಿದ್ದ ರಂಗಸಹಾದ್ರಿ ಸಂಘಟನೆಯ ಅಧ್ಯಕ್ಷ ಡಿ.ಎನ್.ಗಾಂವ್ಕಾರ್, ಗೌತಮ್ ಜುವೆಲ್ಲರ್ಸ್ ಮಾಲೀಕ ಪ್ರಕಾಶ ಶೇಟ್, ಸುಜ್ಞಾನ ಫೌಂಡೇಶನ್ (ರಿ) ಅಧ್ಯಕ್ಷ, ಹಿರಿಯ ಪತ್ರಕರ್ತ ಜಿ.ಎನ್.ಭಟ್ ತಟ್ಟಿಗದ್ದೆ, ಸ್ಪರ್ಧೆಯ ನಿರ್ಣಾಯಕರಾದ ಕನ್ನಡಸಾಹಿತ್ಯ ಪರಿಷತ್ ಅಧ್ಯಕ್ಷ ಸುಬ್ರಹ್ಮಣ್ಯ ಭಟ್ಟ, ಪತ್ತಾರ್ ಸ್ಟುಡಿಯೋ ಮಾಲೀಕ ಗಣೇಶ ಪತ್ತಾರ್, ಡಾ.ಪ್ರತಿಕ್ಷಾ ಶೇಟ್,ಶ್ವೇತಾ ಹೆಗಡೆ ಮುಂತಾದವರು ಮಾತನಾಡಿದರು. ಕಾರ್ಯಕ್ರಮದಲ್ಲಿ ವಿಶೇಷ ಆಹ್ವಾನಿತರಾಗಿ ಮಂಚಿಕೇರಿ ವಿಭಾಗದ ಎಸಿಎಫ್ ಹಿಮವತಿ ಭಟ್, ಯಲ್ಲಾಪುರ ಆನಂದ್ ಎಚ್, ಮಲೆನಾಡು ಸೊಸೈಟಿಯ ಅಧ್ಯಕ್ಷ ಎಂ.ಆರ್.ಹೆಗಡೆ ಕುಂಬ್ರಿಗುಡ್ಡೆ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಿ.ಎಸ್.ಭಟ್ಟ, ತಾಲೂಕಾ ಹವ್ಯಕ ಸಂಘದ ಅಧ್ಯಕ್ಷ ಡಿ.ಶಂಕರ ಭಟ್ಟ, ಶಮಾ ಭಾರತ್ ಗ್ಯಾಸ್ ಮಾಲೀಕರಾದ ಅಬ್ದುಲ್ ಖಾದರ್ ಶೇಖ್, ತಾಲೂಕಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಡಾ.ರವಿ ಭಟ್ ಬರಗದ್ದೆ, ತಾಲೂಕಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಕೆ.ಎಸ್.ಭಟ್ಟ, ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಕಾರ್ಯದರ್ಶಿ ನರಸಿಂಹ ಸಾತೊಡ್ಡಿ ಹಾಗೂ ವಿವಿಧ ಕ್ಷೇತ್ರಗಳ ಗಣ್ಯರು, ಜಿಲ್ಲೆಯ ವಿವಿಧ ಭಾಗಗಳಿಂದ ಆಗಮಿಸಿದ್ದ ನೂರಾರು ಜನರು ಪಾಲ್ಗೊಂಡಿದ್ದರು.ಸುಜ್ಞಾನ ಫೌಂಡೇಶನ್ ಪ್ರಧಾನ ಕಾರ್ಯದರ್ಶಿ ಜ್ಯೋತಿರಾದಿತ್ಯ ಭಟ್ ಯಲ್ಲಾಪುರ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಕವಿತಾ ಬೋಳ್ಗುಡ್ಡೆ ಪ್ರಾರ್ಥಿಸಿದರು. ವಿಜಯವಾಣಿ ಹಾಗೂ ದಿಗ್ವಿಜಯ ನ್ಯೂಸ್ ವರದಿಗಾರ ಶ್ರೀಧರ ಅಣಲಗಾರ್ ನಿರ್ವಹಿಸಿದರು. ಆದರ್ಶ ಶೆಳೆಮನೆ ವಂದಿಸಿದರು.