Slide
Slide
Slide
previous arrow
next arrow

ಗಡಿ ಭಾಗದಲ್ಲಿ ಕನ್ನಡ ಅರಳಿಸುತ್ತಿರುವ ಅಸ್ನೋಟಿಯ ಶಿವಾಜಿ ವಿದ್ಯಾ ಮಂದಿರ

300x250 AD

ಕಾರವಾರ: ತಾಲ್ಲೂಕಿನ ಗಡಿಭಾಗದಲ್ಲಿರುವ ಅಸ್ನೋಟಿ ಶಿವಾಜಿ ವಿದ್ಯಾ ಮಂದಿರ ಹಲವು ವಿಶೇಷತೆಗಳನ್ನು ಒಳಗೊಂಡಿದೆ. ಸದಾ ಸಂಸ್ಕೃತಿ ಸಂಸ್ಕಾರದ ತಳಹದಿಯ ಮೇಲೆ ಸಾಗುತ್ತಾ ಮೌಲಿಕ ಶಿಕ್ಷಣವನ್ನು ಬಿತ್ತುತ್ತಿದೆ. ಕೊಂಕಣಿ ಭಾಷೆ ಇಲ್ಲಿ ಮಾತೃಭಾಷೆ. ಮರಾಠಿ ಮತ್ತು ಕನ್ನಡ ಇಲ್ಲಿನ ಶಿಕ್ಷಣ ಮಾಧ್ಯಮ. ರಾಜ್ಯದ ಗಡಿಯಲ್ಲಿ ಕನ್ನಡದ ಡಿಂಡಿಮ ಮೊಳಗಿಸಬೇಕು, ಮಾಧ್ಯಮಿಕ ಶಿಕ್ಷಣಕ್ಕೆ ಹತ್ತು ಕಿಲೋ ಮೀಟರ್ ದೂರದ ಕಾರವಾರಕ್ಕೆ ಹೋಗುವ ಬದಲು ತಮ್ಮ ಮತ್ತು ಸುತ್ತಮುತ್ತಲ ಊರಿನ ವಿದ್ಯಾರ್ಥಿಗಳಿಗೆ ಅನುಕೂಲ ಆಗಬೇಕು ಎನ್ನುವ ದೃಷ್ಟಿಯಿಂದ ಅಸ್ನೋಟಿಯ ಹಿರಿಯರು ಶಿಕ್ಷಣ ಚಿಂತಕರು ಸೇರಿ 1960ರ ಜೂ.1ರಲ್ಲಿ ಶಿವಾಜಿ ವಿದ್ಯಾ ಮಂದಿರಕ್ಕೆ ನಾಂದಿ ಹಾಡಿದರು.

ಅಂದು ಪ್ರಾರಂಭವಾದ ಪ್ರೌಢಶಾಲೆ ಗಡಿಭಾಗದಲ್ಲಿ ಅವಿರತವಾಗಿ ವಿದ್ಯಾರ್ಥಿಗಳಿಗೆ ವಿದ್ಯಾರ್ಜನೆ ಮಾಡುತ್ತ ಬಂದಿತ್ತು. ಆದರೆ. 1960ರಲ್ಲಿ ಪ್ರಾರಂಭವಾದ ಶಾಲೆಗೆ ಬಹುದೊಡ್ಡ ಸಂಕಟ ಎದುರಾಗಿದ್ದು ಗ್ರಾಮೀಣ ಭಾಗದಲ್ಲಿಯೂ ಇಂಗ್ಲಿಷ್ ಮಾಧ್ಯಮ ಶಾಲೆಗಳ ಆರಂಭವಾದಾಗ. ಅಲ್ಲಲ್ಲಿ ಇಂಗ್ಲಿಷ ಮಾಧ್ಯಮ ಶಾಲೆಗಳು ಕಣ್ತೆರೆದಿದ್ದರಿಂದ ಮರಾಠಿ ಮತ್ತು ಕನ್ನಡ ಮಾಧ್ಯಮ ಶಾಲೆಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಗಣನೀಯವಾಗಿ ಕಡಿಮೆಯಾಗುತ್ತ ಹೋಯಿತು.
ಈ ಸವಾಲಿನಿಂದ ಕಂಗೆಡದೆ ಅದನ್ನು ಎದುರಿಸಲು ಆಡಳಿತ ಮಂಡಳಿ ಸಜ್ಜಾಯಿತು. ಅಂದು ಆರ್ಥಿಕ ಮತ್ತು ಶೈಕ್ಷಣಿಕವಾಗಿ ಹಿಂದುಳಿದ ಜೋಯಿಡಾ ಪ್ರದೇಶದ ಮಕ್ಕಳನ್ನು ಕರೆದುಕೊಂಡು ಅವರಿಗೆ ಊಚಿತ ಊಟ ಮತ್ತು ವಸತಿ ಸೌಕರ್ಯವನ್ನು ಕಲ್ಪಿಸಿತು. ಇದರಿಂದಾಗಿ ಶಿವಾಜಿ ವಿದ್ಯಾಮಂದಿರದಲ್ಲಿ ಶೈಕ್ಷಣಿಕ ಚಟುವಟಿಕೆಗಳು ಗರಿಗೆದರಿದಲ್ಲದೆ ಶಿಕ್ಷಣ ವಂಚಿತ ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಶಿಕ್ಷಣ ಪಡೆಯುವಂತಾಯಿತು. ಅಮದಳ್ಳಿಯ ಪ್ರೇಮಾಶ್ರಮ ಚಾರಿಟೆಬಲ್ ಟ್ರಸ್ಟ್ ಶಾಲೆಗೆ ಆಧಾರ ಸ್ತಂಭವಾಗಿ ನಿಂತಿದೆ. ಬಾಲಕಿಯರ ವಸತಿ ನಿಲಯ ಕಟ್ಟಿಸಿಕೊಟ್ಟು ಉಚಿತ ಶಿಕ್ಷಣಕ್ಕೆ ಆಶಾದೀಪವಾಗಿದೆ. ಜೊತೆಗೆ ಶ್ರೀಮತಿ ಸರೋಜಾ ಬಾಳಾ ದೇಸಾಯಿ ಚಾರಿಟೆಬಲ್ ಟ್ರಸ್ಟ್ ಮೂಲಕ ಸಮಾಜ ಸೇವಕ ನರೇಂದ್ರ ದೇಸಾಯಿ ಅವರು ಬಾಲಕರ ವಸತಿನಿಲಯದ ವಿದ್ಯಾರ್ಥಿಗಳಿಗೆ ಆಶ್ರಯದಾತರಾಗಿ ಶಾಲೆಗೆ ಮತ್ತೊಂದು ಸ್ಥಂಭವಾಗಿ ಪರಣಿಮಿಸಿದ್ದಾರೆ. ಇದು ಶಾಲೆಗೆ ಆನೆಬಲ ತಂದುಕೊಟ್ಟಿತು. ಹಲವು ರೀತಿಯ ಏಳು ಬೀಳುಗಳನ್ನು ಕಂಡು ಇಂದು ಗಡಿಭಾಗದಲ್ಲಿ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣವನ್ನು ನೀಡುತ್ತಿದೆ.

ಒಂದರ ಹಿಂದೆ ಒಂದೊರಂತೆ ಸಾಧನೆ ಮಾಡುತ್ತ ಬಂದ ಶಿವಾಜಿ ವಿದ್ಯಾ ಮಂದಿರಕ್ಕೆ ಎಡ ಬಲದಂತಿರುವ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಉಮೇಶ್ ಸಾಳುಂಕೆ, ಕಾರ್ಯದರ್ಶಿ ಸಂಜಯ ಸಾಳುಂಕೆಯವರ ದೂರದೃಷ್ಟಿ ಶಾಲೆಯ ಹಿರಿಮೆಗೆ ಸಾಕ್ಷಿಯಾಗಿದೆ. ಆಧುನಿಕ ಶಿಕ್ಷಣಕ್ಕೆ ಒತ್ತು ನೀಡಿದ್ದರಿಂದ ಎಜುಸ್ಯಾಟ್ ಶಿಕ್ಷಣ ಪಡೆದ ಜಿಲ್ಲೆಯ ಮೊದಲ ಪ್ರೌಢಶಾಲೆ ಎನಿಸಿಕೊಂಡಿತ್ತು. 2018ರಲ್ಲಿ ಸ್ಮಾರ್ಟ್ ಕ್ಲಾಸ್ ನ್ನು ಮಾಜಿ ವಿದ್ಯಾರ್ಥಿಗಳ ಸಹಾಯದಿಂದ ಪಡೆಯುವುದರೊಂದಿಗೆ ಗುಣಮಟ್ಟದ ಶಿಕ್ಷಣ ಒದಗಿಸಲು ಆರಂಭಿಸಿತು. ಸಮಾಜ ಸೇವಕ ನರೇಂದ್ರ ದೇಸಾಯಿಯವರು ಉಚಿತವಾಗಿ ಇಂಟರ್ ನೆಟ್ ಸೌಲಭ್ಯ ಕಲ್ಪಿಸಿಕೊಟ್ಟಿದ್ದಾರೆ. ಕೇವಲ ಪಠ್ಯ ಅಷ್ಟೇ ಅಲ್ಲದೇ ಕ್ರೀಡೆ ಸೇರಿದಂತೆ ಪಠ್ಯೇತರ ಚಟುವಟಕೆಗಳಲ್ಲಿ ಶಾಲೆ ಸಾಧನೆ ಮಾಡಿತು. ಪ್ರತಿಭಾ ಕಾರಂಜಿ ಮತ್ತು ಕ್ರೀಡೆಗಳಲ್ಲಿ ರಾಜ್ಯ ಮಟ್ಟದಲ್ಲಿ ಗುರುತಿಸಿಕೊಂಡಿತು.

ಶಾಲೆಯಲ್ಲಿರುವ ಎಲ್ಲಾ ಶಿಕ್ಷಕರು ಎಸ್‌ಎಸ್‌ಎಲ್‌ಸಿ ಗುಣಾತ್ಮಕ ಫಲಿತಾಂಶಕ್ಕೆ ಕೊಡಲ್ಪಡುವ ಕಟ್ಟಿಮನಿ ಪ್ರಶಸ್ತಿ ಪಡೆದಿರುವುದು ಈ ಶಾಲೆಯ ವಿಶೇಷತೆಯಲ್ಲಿ ವಿಶೇಷ. ಆಯಾ ವಿಷಯಗಳ ಶಿಕ್ಷಕರು ಸಂಪನ್ಮೂಲ ವ್ಯಕ್ತಿಗಳಾಗಿರುವುದರಿಂದ ಇಲ್ಲಿ ವಿದ್ಯಾರ್ಥಿಗಳಿಗೆ ಗುಣಾತ್ಮಕ ಶಿಕ್ಷಣ ಸಿಗುತ್ತಿದೆ ಎನ್ನುವುದರಲ್ಲಿ ಎರಡು ಮಾತಿಲ್ಲ. ಒಟ್ಟಿನಲ್ಲಿ ತಾಲ್ಲೂಕಿನ ಗಡಿಭಾಗದಲ್ಲಿ ಇಂತಹ ವಿಶಿಷ್ಠವಾದ ವಿಶೇಷ ಶಾಲೆಯೊಂದು ಇದೆ ಎಂಬುದೇ ಹೆಮ್ಮೆಯ ವಿಚಾರವಾಗಿದೆ.

300x250 AD

ಮೂವರು ಜಿಲ್ಲಾ ಉತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತರಿರುವ ಏಕೈಕ ಶಾಲೆ: ಶಾಲೆಯ ಸಾಧನೆ ಗುರುತಿಸಿ ಮುಖ್ಯಾಧ್ಯಾಪಕ ದಿನೇಶ ಗಾಂವಕರ್ ಅವರಿಗೆ ಶಿಕ್ಷಣ ಇಲಾಖೆ 2009 ರಲ್ಲಿ ಜಿಲ್ಲಾ ಮಟ್ಟದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ನೀಡಿ ಗೌರವಿಸಿತು. 2015 ರಲ್ಲಿ ಗಣೇಶ ಬಿಷ್ಠಣ್ಣನವರ ಅವರಿಗೆ ಜಿಲ್ಲಾ ಮಟ್ಟದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಅರಸಿ ಬಂದಿತು. ಹೀಗೆ ಶೈಕ್ಷಣಿಕ ಕ್ಷೇತ್ರದಲ್ಲಿ ನಿರಂತರವಾಗಿ ಹೊಸತನ ಕಾಯ್ದುಕೊಂಡು ಬಂದಿರುವ ಶಿವಾಜಿ ವಿದ್ಯಾ ಮಂದಿರದ ಮತ್ತೊಬ್ಬ ಶಿಕ್ಷಕ ಜೆ.ಬಿ. ತಿಪ್ಪೆಸ್ವಾಮಿ ಅವರಿಗೆ ಪ್ರಸಕ್ತ ಸಾಲಿನಲ್ಲಿ ಅಂದರೆ 2022 ರ ಜಿಲ್ಲಾ ಅತ್ಯುತ್ತಮ ಪ್ರಶಸ್ತಿ ಬಂದಿದೆ. ಹೀಗೆ ಮೂವರು ಶಿಕ್ಷಕರು ಜಿಲ್ಲಾ ಮಟ್ಟದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಭಾಜನರಾಗುವ ಮೂಲಕ ಶಿವಾಜಿ ವಿದ್ಯಾ ಮಂದಿರ ಶೈಕ್ಷಣಿಕ ಕ್ಷೇತ್ರದಲ್ಲಿ ವಿಶಿಷ್ಟ ರೀತಿಯಲ್ಲಿ ತನ್ನನ್ನು ಗುರುತಿಸಿಕೊಂಡಿದೆ.

ಹೊಸತನಕ್ಕೆ ನಾಂದಿ: ಮುಳುಗುವವನಿಗೆ ಹುಲ್ಲುಕಡ್ಡಿಯು ಆಸರೆ ಎನ್ನುವಂತೆ ಮಕ್ಕಳ ಸಂಖ್ಯೆ ಕಡಿಮೆ ಆಗಿ ಶಾಲೆ ಸಂಕಷ್ಟದ ಸ್ಥಿತಿಯಲ್ಲಿರುವಾಗ ವಿದ್ಯಾ ಮಂದಿರಕ್ಕೆ ಶಿಕ್ಷಕನ ರೂಪದಲ್ಲಿ ಸಮಾಜಿಕ, ಸಾಂಸ್ಕೃತಿಕ ಮನಸ್ಸಿನ ಗಣೇಶ ಬಿಷ್ಠಣ್ಣನವರ ಸೇರ್ಪಡೆ ಆಯಿತು. ಕ್ರಿಯಾಶೀಲ ವ್ಯಕ್ತಿತ್ವದ ಬಿಷ್ಠಣ್ಣನವರು ಮತ್ತು ಶಾಲೆಯ ಮುಖ್ಯಾಧ್ಯಾಪಕ ದಿನೇಶ ಗಾಂವಕರ ಸೇರಿದಂತೆ ಆಡಳಿತ ಮಂಡಳಿಯ ನೆರವಿನೊಂದಿಗೆ ಶಾಲೆಯಲ್ಲಿ ಹೊಸತನಕ್ಕೆ ನಾಂದಿ ಹಾಡಿದರು. ಕಾರವಾರ ಸೇರಿದಂತೆ ಸುತ್ತಮುತ್ತಲಿರುವ ದಾನಿಗಳನ್ನು ಸಂಪರ್ಕಿಸಿ ಶಾಲೆಗೆ ಅಗತ್ಯವಿರುವ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಲು ನೆರವಾದರು. ಶಾಲೆಯಲ್ಲಿ ಉತ್ತಮ ಶಿಕ್ಷಣ ಸಿಗುತ್ತಿದೆ ಎನ್ನುವುದು ಸುತ್ತಮುತ್ತಲಿನ ಊರುಗಳಿಗೆ ಪ್ರಚಾರವಾಗಿದ್ದರಿಂದ ತರಗತಿಯಲ್ಲಿ ವಿದ್ಯಾರ್ಥಿಗಳ ಸಂಖ್ಯೆಯೂ 19ರಿಂದ 40ಕ್ಕೆ ಏರಿತು.

Share This
300x250 AD
300x250 AD
300x250 AD
Back to top