ಹೊನ್ನಾವರ: ಸ್ಥಳೀಯ ನ್ಯೂ ಇಂಗ್ಲೀಷ್ ಸ್ಕೂಲ್ ಕನ್ನಡ ಮಾಧ್ಯಮದಲ್ಲಿ ದೈಹಿಕ ಶಿಕ್ಷಣ ಶಿಕ್ಷಕರಾಗಿರುವ ಯಶವಂತ ಮೇಸ್ತ ಅವರಿಗೆ 2022ನೇ ಸಾಲಿನ ತಾಲೂಕು ಮಟ್ಟದ ಉತ್ತಮ ಸ್ಕೌಟ್ ಮಾಸ್ಟರ್ ಪ್ರಶಸ್ತಿ ಲಭಿಸಿದೆ.
ಇವರು ಕಳೆದ 26 ವರ್ಷಗಳಿಂದ ದೈಹಿಕ ಶಿಕ್ಷಣ ಶಿಕ್ಷಕರಾಗಿ ಶಾಲೆಯ, ಶಿಕ್ಷಣ ಇಲಾಖೆಯ ಹಲವಾರು ಕ್ರೀಡಾ ಚಟುವಟಿಕೆಯಲ್ಲಿ ನಿರತರಾಗಿದ್ದಾರೆ. ಜೊತೆಗೆ ಕಳೆದ 20 ವರ್ಷಗಳಿಂದ ಶಾಲೆಯಲ್ಲಿ ಸ್ಕೌಟ್ ವಿಭಾಗವನ್ನು ಸಂಘಟಿಸಿ 15ಕ್ಕಿಂತ ಹೆಚ್ಚು ವಿದ್ಯಾರ್ಥಿಗಳಿಗೆ ರಾಷ್ಟ್ರಪತಿ ಪುರಸ್ಕಾರವನ್ನು ಹಾಗೂ 40ಕ್ಕಿಂತಲೂ ಹೆಚ್ಚು ವಿದ್ಯಾರ್ಥಿಗಳಿಗೆ ರಾಜ್ಯ ಪುರಸ್ಕಾರಕ್ಕೂ ಮಾರ್ಗದರ್ಶನವನ್ನು ಮಾಡಿ ವಿದ್ಯಾರ್ಥಿಗಳ ಸಾಧನೆಗೆ ಪ್ರೇರಕರಾಗಿದ್ದಾರೆ.
ಸರ್ಕಾರದ ಪ್ರಮುಖ ಯೋಜನೆಗಳಾದ ಸ್ವಚ್ಛ ಭಾರತ ಅಭಿಯಾನ, ಅಂತರರಾಷ್ಟ್ರೀಯ ಯೋಗ ದಿನಾಚರಣೆ, ಸ್ವಾತಂತ್ರ‍್ಯದ ಅಮೃತ ಮಹೋತ್ಸವ ಮುಂತಾದ ಕಾರ್ಯಕ್ರಮಗಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ. ಕೋವಿಡ್ ಅವಧಿಯಲ್ಲಿ ತಾಲೂಕು ಮಟ್ಟದ ಉತ್ತಮ ಕೋವಿಡ್ ವಾರಿಯರ್ ಆಗಿ ಗುರುತಿಸಲ್ಪಟ್ಟಿದ್ದಾರೆ. ಸ್ಕೌಟ್ ಅಂಡ್ ಗೈಡ್ಸ್ನವರು ಆಯೋಜಿಸುವ ಎಲ್ಲಾ ಕ್ಯಾಂಪುಗಳಲ್ಲಿ ಹಾಗೂ ಚಟುವಟಿಕೆಗಳಲ್ಲಿ ಭಾಗವಹಿಸಿದ್ದಾರೆ.
ತಾಲೂಕಿನ ಉತ್ತಮ ಕಲಾಕಾರರಾಗಿ ಗುರುತಿಸಿಕೊಂಡಿರುವ ಇವರು, ಉತ್ತಮ ಸೃಜನಶೀಲ, ಮೃಧು ಸ್ವಭಾವದ ವ್ಯಕ್ತಿತ್ವದವರು. ಇವರನ್ನು ಉತ್ತಮ ಶಿಕ್ಷಕ ಪ್ರಶಸ್ತಿಗೆ ಆಯ್ಕೆ ಮಾಡಿರುವುದಕ್ಕಾಗಿ ಶಾಲಾ ಆಡಳಿತ ಮಂಡಳಿಯ ಅಧ್ಯಕ್ಷ ರಘುನಾಥ್ ಪೈ ಹಾಗೂ ಸದಸ್ಯರು ಮುಖ್ಯಾಧ್ಯಾಪಕರು, ಶಿಕ್ಷಕರು, ವಿದ್ಯಾರ್ಥಿಗಳು, ಹಿತೈಶಿಗಳು ಸಂತಸ ವ್ಯಕ್ತಪಡಿಸಿದ್ದಾರೆ.