ಸಿದ್ದಾಪುರ: ಕಳೆದ 67 ವರ್ಷಗಳಿಂದ ನಿರಂತರವಾಗಿ ತಾಲೂಕಿನ ಹೇರೂರಿನ ಶ್ರೀ ಸಿದ್ಧಿವಿನಾಯಕ ದೇವಸ್ಥಾನದಲ್ಲಿ ನಡೆಸಿಕೊಂಡು ಬರುತ್ತಿರುವ ಯಕ್ಷಗಾನ, ತಾಳಮದ್ದಳೆ,ಹಾಗೂ ದೇವತಾರಾಧನೆ ಕಾರ್ಯಕ್ರಮ ಜನಮನಸೂರೆಗೊಂಡಿದೆ.
ಪ್ರಸ್ತುತ ವರ್ಷದ ಯಕ್ಷಗಾನದ ತಾಳಮದ್ದಳೆಯಾಗಿ ‘ರಾಮಾಂಜನೇಯ’ ಆಖ್ಯಾನವನ್ನು ಏರ್ಪಡಿಸಲಾಗಿದ್ದು, ಹಿಮ್ಮೇಳದ ಭಾಗವತರಾಗಿ ಮಹಿಳಾ ಖ್ಯಾತಿಯ ಶ್ರೀಮತಿ ಕಾವ್ಯಶ್ರೀ ಅಜೇರು ಹಾಗೂ ಮದ್ದಲೆಯಲ್ಲಿ ಚಂದ್ರಶೇಖರ ಗುರುವಾಯನಕೆರೆ ಪಾಲ್ಗೊಂಡರು.
ಮುಮ್ಮೇಳದ ಅರ್ಥಧಾರಿಗಳಾಗಿ ವಾಸುದೇವ ರಂಗ ಭಟ್ ಮಧೂರು, ಹರೀಶ್ ಬಳಂತಿಮುಗರು,ಪಾವನ ಕಿರಣಕೆರೆ,ಶಿರಸಿಯ ಚಂದು, ಮಂಜುನಾಥ್ ಗೋರ್ಮನೆಯವರು ಪಾಲ್ಗೊಂಡು ಆಯಾ ಪಾತ್ರಗಳ ನಿರ್ವಹಣೆಯನ್ನು ಸಮರ್ಥವಾಗಿ ನೆರವೇರಿಸಿದರು.
ಕಾರ್ಯಕ್ರಮದ ಸಂಘಟನೆಯ ಪ್ರಮುಖರಾದ ಗಣೇಶ ಹೇರೂರು ಮತ್ತು ಕುಟುಂಬದವರಿಂದ ಹೇರೂರಿನಲ್ಲಿ ನಡೆದ ತಾಳಮದ್ದಳೆ ಸರಣಿಯಲ್ಲಿ ಹಲವಾರು ವರ್ಷ ಸೇವೆ ಮಾಡಿದ ಮಾಬ್ಲೇಶ್ವರ ರಾ.ಹೆಗಡೆ ಹರಿಗಾರು, ಮಂಜುನಾಥ್ ಕೃ ಹೆಗಡೆ ಬಣಗಾರು, ಶಿರಸಿ ಸೀತಾರಾಮ್ ಚಂದು ಹಾಗೂ ಶ್ರೀಧರ್ ಷಡಕ್ಷರಿ ಆನೆಗುಂದಿಯವರನ್ನು ಸನ್ಮಾನಿಸಲಾಯಿತು.