ಶಿರಸಿ: ಅರಣ್ಯವಾಸಿಗಳ ಸಮಸ್ಯೆಗಳ ಕುರಿತು ಮುಂಬರುವ ಮಳೆಗಾಲದ ವಿಧಾನಸಭಾ ಅಧಿವೇಶನದಲ್ಲಿ ಪೂರ್ಣಪ್ರಮಾಣದ ಚರ್ಚೆಯ ಮೂಲಕ ಅಣ್ಯವಾಸಿಗಳ ಪರವಾದ ನಿಲುವನ್ನ ರಾಜ್ಯ ಸರಕಾರ ತೆಗೆದುಕೊಳ್ಳಬೇಕೆಂದು ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆಯು ವಿಧಾನ ಸಭಾ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಅವರಿಗೆ ಒತ್ತಾಯಿಸಲು ತೀರ್ಮಾನಿಸಲಾಗಿದೆ ಎಂದು ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆ ಅಧ್ಯಕ್ಷ ರವೀಂದ್ರ ನಾಯ್ಕ ತಿಳಿಸಿದ್ದಾರೆ.
ಅವರು ಜಿಲ್ಲಾ ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆಯ ಕಾರ್ಯಾಲಯದಲ್ಲಿ ಮುಖ್ಯಮಂತ್ರಿಗೆ ಬರೆದ ಪತ್ರವನ್ನ ಬಿಡುಗಡೆಗೊಳಿಸುತ್ತಾ ಮೇಲಿನಂತೆ ಹೇಳಿದರು.
ಸುಫ್ರೀಂ ಕೋರ್ಟನಲ್ಲಿ ಈಗಾಗಲೇ ಅರಣ್ಯ ಭೂಮಿ ಹಕ್ಕು ಕಾಯಿದೆ ಅಡಿಯಲ್ಲಿ ತಿರಸ್ಕಾರವಾಗಿರುವ ಅತಿಕ್ರಮಣದಾರರನ್ನ ಒಕ್ಕಲೆಬ್ಬಿಸಬೇಕೆಂಬ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ಅಂತಿಮ ವಿಚಾರಣೆ ಜರಗುತ್ತಿರುವುದರಿಂದ ರಾಜ್ಯ ಸರಕಾರವು ಸ್ಪಷ್ಟವಾದ ಅರಣ್ಯವಾಸಿಗಳ ಪರ ನಿಲುವನ್ನ ವಿದಾನ ಸಭೆಯ ಅಧಿವೇಶನದಲ್ಲಿ ನಿರ್ಣಯಿಸಬೇಕೆಂದು ಅವರು ಹೇಳಿದರು.
ಹತ್ತು ಹಕ್ಕೋತ್ತಾಯ: ಅರಣ್ಯ ಹಕ್ಕು ಕಾಯಿದೆ ಅನುಷ್ಠಾನದಲ್ಲಿನ ವೈಫಲ್ಯ ಸರಿಪಡಿಸುವುದು, ಅರಣ್ಯ ಅಧಿಕಾರಿಗಳ ದೌರ್ಜನ್ಯ ನಿಯಂತ್ರಿಸುವುದು, ಶಿವಮೊಗ್ಗ ಶರಾವತಿ ಅಭಯಾರಣ್ಯಕ್ಕೆ ಉತ್ತರ ಕನ್ನಡ ಜಿಲ್ಲಾ ಅರಣ್ಯ ಪ್ರದೇಶ ಸೇರ್ಪಡೆಗೆ ವಿರೋಧ, ಅರಣ್ಯವಾಸಿಗಳ ಸೌಲಭ್ಯದಿಂದ ವಂಚಿತರಾಗದ ರೀತಿ ಕಾರ್ಯನಿರ್ವಹಿಸುವುದು, 1978ರ ಪೂರ್ವ ಅತಿಕ್ರಮಣದಾರರ ಹಕ್ಕು ಪತ್ರ ಶೀಘ್ರ ವಿಲೇವಾರಿ ಮಾಡುವುದು, ಅರಣ್ಯ ಅಧಿಕಾರಿಗಳು ಅರಣ್ಯ ಪ್ರದೇಶದಲ್ಲಿ ಇತ್ತೀಚಿನ 5 ವರ್ಷದಲ್ಲಿ 1 ಲಕ್ಷ ಮರ ಕಡಿತ ಅವೈಜ್ಞಾನಿಕ ನೀತಿ ಮತ್ತು ಅರಣ್ಯ ಕ್ಷೇತ್ರದಲ್ಲಿ ಕಾಮಗಾರಿ ತನಿಖೆಗೆ ಅಗ್ರಹ, ಅರಣ್ಯ ಹಕ್ಕು ಕಾಯಿದೆಯಲ್ಲಿ ಅರ್ಜಿ ಸಲ್ಲಿಸಿದವರನ್ನು ಮಂಜೂರಾತಿ ಪ್ರಕ್ರಿಯೆ ಮುಗಿಯುವರೆಗೂ ಒಕ್ಕಲೆಬ್ಬಿಸಿರುವ ಪ್ರಕ್ರಿಯೆ ಸ್ಥಗಿತಗೊಳಿಸುವುದು, ಅರಣ್ಯವಾಸಿಗಳ ಸಮಸ್ಯೆಗಳ ಕುರಿತು ಅರಣ್ಯವಾಸಿ ಹೋರಾಟಗಾರರೊಂದಿಗೆ ಉನ್ನತ ಮಟ್ಟದ ಸಭೆ ಜರುಗಿಸುವುದು, ಸುಫ್ರೀಂ ಕೋರ್ಟನಲ್ಲಿ ರಾಜ್ಯ ಸರಕಾರ ಅರಣ್ಯವಾಸಿಗಳ ಪರ ತಿದ್ದುಪಡಿ ಪ್ರಮಾಣ ಪತ್ರ ಸಲ್ಲಿಸುವುದು ಹಾಗೂ ಅರಣ್ಯವಾಸಿಗಳ ಮೇಲೆ ದಾಖಲಿಸಿದ ಕ್ರೀಮಿನಲ್ ಪ್ರಕರಣ ಹಿಂದಕ್ಕೆ ಪಡೆಯಬೇಕೆಂದು ಮುಖ್ಯಮಂತ್ರಿಗಳಿಗೆ ಆಗ್ರಹಿಸುವ ಹತ್ತು ಪ್ರಮುಖ ಬೇಡಿಕೆಯನ್ನು ಮನವಿ ಪತ್ರದಲ್ಲಿ ಉಲ್ಲೇಖಿಸಲಾಗಿದೆ ಎಂದು ರವೀಂದ್ರ ನಾಯ್ಕ ಹೇಳಿದರು.
ಈ ಸಂದರ್ಭದಲ್ಲಿ ಚಂದ್ರು ಆರ್ ನಾಯ್ಕ, ಮಾರುತಿ ಗಣಪತಿ ವೈಧ್ಯ, ಸುಬ್ರಾಯ ಪೂಜಾರಿ, ಜನಾರ್ಧನ ಎನ್ ನಾಯ್ಕ, ನಾಗರಾಜ ಎಸ್ ದೇವಸ್ಥಳ್ಳಿ, ಶರತ್ ಡಿ ಪಾವಸ್ಕರ್ ಮುಂತಾದವರು ಉಪಸ್ಥಿತರಿದ್ದರು.