ಜೊಯಿಡಾ: ತಾಲೂಕಿನ ನಾಗೋಡಾ ಗ್ರಾಮ ಪಂಚಾಯತ ವ್ಯಾಪ್ತಿಯಲ್ಲಿ ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತರಾಜ್ ಇಲಾಖೆಯ ಅಡಿಯಲ್ಲಿ 1 ಕೋಟಿ 75 ಲಕ್ಷ ವೆಚ್ಚದಲ್ಲಿ ಮಂಜೂರಾದ ಕುಡಿಯುವ ನೀರಿನ ಕಾಮಗಾರಿಗಳಿಗೆ ಶಾಸಕ ಆರ್.ವಿ.ದೇಶಪಾಂಡೆ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ನಾಗೋಡಾ ಗ್ರಾಮ ಪಂಚಾಯತ ವ್ಯಾಪ್ತಿಯ ಮನೆ ಮನೆಗೆ ಕುಡಿಯುವ ನೀರಿನ ವ್ಯವಸ್ಥೆ ಆಗಬೇಕು. ಈ ಬಗ್ಗೆ ಅಧಿಕಾರಿಗಳು ಮತ್ತು ಗ್ರಾ.ಪಂ. ಜನಪ್ರತಿನಿಧಿಗಳು ಲಕ್ಷ್ಯ ವಹಿಸಬೇಕು. ಈಗಾಗಲೇ ಕೋಟ್ಯಾಂತರ ರೂಪಾಯಿಗಳನ್ನು ನಾಗೋಡಾ ಗ್ರಾಮ ಪಂಚಾಯತಿ ಅಭಿವೃದ್ಧಿಗಾಗಿ ಮಂಜೂರು ಮಾಡಲಾಗಿದೆ. 5 ಕೋಟಿ ರೂ. ವೆಚ್ಚದಲ್ಲಿ ಸೇತುವೆ ನಿರ್ಮಾಣವಾಗುತ್ತಿದೆ. ರಸ್ತೆ ಕೆಲಸಗಳು ಆಗಿವೆ, ಇನ್ನೂ ಯಾವ ಕೆಲಸ ಆಗಬೇಕು ಎಂಬುದನ್ನು ತಿಳಿಸಿ ಎಂದರು.
ನಾಗೋಡಾ ಗ್ರಾಮ ಪಂಚಾಯತಿ ಅಧ್ಯಕ್ಷ ದಿಗಂಬರ ದೇಸಾಯಿ ಮಾತನಾಡಿ, ರಸ್ತೆ, ಕುಡಿಯುವ ನೀರು, ಸೇತುವೆ ಸೇರಿದಂತೆ ನಮ್ಮ ಗ್ರಾಮ ಪಂಚಾಯತಗೆ ಕಳೆದ 5 ವರ್ಷಗಳಲ್ಲಿ 10 ಕೋಟಿಗೂ ಹೆಚ್ಚು ಅನುದಾನವನ್ನು ಶಾಸಕರಾದ ಆರ್.ವಿ.ದೇಶಪಾಂಡೆ ಅವರು ಮಂಜೂರು ಮಾಡಿದ್ದಾರೆ. ಅವರಿಂದಿಲೇ ನಮ್ಮ ಗ್ರಾಮ ಪಂಚಾಯತಿ ಸಾಕಷ್ಟು ಅಭಿವೃದ್ಧಿ ಕಂಡಿದೆ. ನಮ್ಮ ಗ್ರಾಮ ಪಂಚಾಯತ ಮತ್ತು ಊರ ನಾಗರಿಕರ ಪರವಾಗಿ ಅವರನ್ನು ಅಭಿನಂದಿಸುತ್ತೇನೆ ಎಂದರು.
ಈ ಸಂದರ್ಭದಲ್ಲಿ ನಾಗೋಡಾ ಗ್ರಾಮದ ಜನರು ಸೇತುವೆ ನಿರ್ಮಾಣಕ್ಕೆ ಮೂಲ ಕಾರಣೀಕರ್ತರಾದ ಆರ್.ವಿ.ದೇಶಪಾಂಡೆ ಅವರಿಗೆ ಗೌರವಿಸಿ ಸನ್ಮಾನಿಸಿದರು. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸದಾನಂದ ದಬ್ಗಾರ, ಜಿ.ಪಂ ಮಾಜಿ ಸದಸ್ಯ ರಮೇಶ್ ನಾಯ್ಕ, ಸಂಜಯ ಹಣಬರ, ತಾಲೂಕು ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ಪಪ್ಪು ಖಲೀಫಾ, ಪಂಚಾಯತ್‌ರಾಜ್‌ನ ಇಝಾನ ಮಹಮ್ಮದ್, ಲೋಕೋಪಯೋಗಿ ಇಲಾಖೆಯ ವಿಜಯಕುಮಾರ್ ಇತರರು ಇದ್ದರು.