ಶಿರಸಿ: ತಾಲೂಕಿನ ದೇವನಳ್ಳಿ ಗ್ರಾಪಂ. ವ್ಯಾಪ್ತಿಯ ಪುಟ್ಟ ಹಳ್ಳಿ ಬೆಣಗಾಂವ ಗ್ರಾಮದ ನಿಡಗೋಡು. ಓಡಾಡಲು ಮೂಲಭೂತ ಸೌಕರ್ಯವಾದ ರಸ್ತೆ ಮತ್ತು ಕಾಲುಸಂಕ, ಸೇತುವೆ ವಂಚಿತ ಹಳ್ಳಿ. ಗ್ರಾಮಸ್ಥರು ಪ್ರತಿವರ್ಷ ತಮ್ಮ ಅನುಕೂಲಕ್ಕೆ ಶಿಥಿಲ ವ್ಯವಸ್ಥೆಯಲ್ಲಿರುವ ನೀರುಕಾಲುವೆ ದುರಸ್ಥಿ ಮಾಡಿಕೊಂಡು ಓಡಾಡುವ ಪ್ರವೃತ್ತಿ ಮಾಡಿಕೊಳ್ಳುತ್ತಿರುವುದು ವಿಶೇಷ.
ರಸ್ತೆ ಮತ್ತು ಸಮರ್ಪಕ ನೀರುಕಾಲುವೆ ಕಾಲುಸಂಕದ ಅನಾನೂಕೂಲದಿಂದ ಪ್ರತಿವರ್ಷ 5,6 ಗ್ರಾಮಸ್ಥರು ದ್ವಿಚಕ್ರ ವಾಹನದಿಂದ ಬಿದ್ದಿರುವಂತಹ ಪಟ್ಟಿಯಲ್ಲಿ ಸಾಕಷ್ಟು ಹೆಸರು ಸೇರಲ್ಪಟ್ಟಿದೆ. ಅದರಂತೆ, ಅಸಮರ್ಪಕ ರಸ್ತೆಯಲ್ಲಿ ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆಯ ಆಶ್ರಯದಲ್ಲಿ ದಿ. 29 ರಂದು ದೇವನಳ್ಳಿಯಲ್ಲಿ ‘ಹಳ್ಳಿ ಕಡೆ ನಡಿಗೆ’ ನಡೆದ ರಾತ್ರಿಯೇ ಇನ್ನೊಂದು ಘಟನೆ ಜರುಗಿರುವುದು ಖೇದಕರ.
ಬೆಣಗಾಂವ ಗ್ರಾಮದ, ನಿಡಗೋಡು ಹಳ್ಳಿಯ ಈಶ್ವರ ಮರಾಠಿ ಅಸಮರ್ಪಕ ರಸ್ತೆಯಲ್ಲಿ ದ್ವಿಚಕ್ರ ವಾಹನ ಓಡಿಸುವ ಸಂದರ್ಭದಲ್ಲಿ ವಾಹನದಿಂದ ಬಿದ್ದು ಬಲತೊಡೆಯ ಮಾಂಸಖಂಡ ಮತ್ತು ನರಕ್ಕೆ ತೀವ್ರ ಗಾಯಪಟ್ಟಿರುವುದು ದುಖಃಕರ ಸಂಗತಿ. ಗಾಯಕ್ಕೆ ಒಳಪಟ್ಟಿರುವ ಈಶ್ವರನ ಸಹೋದರ ದತ್ತಾತ್ರೇಯ ಮರಾಠಿ ಕೊರಕಲು ರಸ್ತೆಯಿಂದ ವಾಹನಗಳನ್ನ ಚಲಾಯಿಸುವುದೇ ಕಷ್ಟಕರವಾಗಿದೆ. ಕೊರಕಲು ರಸ್ತೆಯಿಂದ ಇಂತಹ ಘಟನೆ ಮರುಕಳಿಸುತ್ತಾ ಇದ್ದಾಗಲೂ ಸೌಕರ್ಯ ಒದಗಿಸದೇ ಇರುವುದು ಖೇದಕರ ಎಂಬ ಅಭಿಪ್ರಾಯ ವ್ಯಕ್ತಪಡಿಸಿದರು.
ತೀವ್ರ ಆಕ್ರೋಶ: ರಸ್ತೆ, ಸೇತುವೆ, ಕಾಲುಸಂಕ ಮುಂತಾದ ಮೂಲಭೂತ ಸೌಲಭ್ಯಗಳಿಂದ ಗ್ರಾಮ ಪಂಚಾಯತ ಹೆಚ್ಚಿನ ಹಳ್ಳಿಗಳು ವಂಚಿತವಾಗಿರುವುದು ಹಾಗೂ ಈ ದಿಶೆಯಲ್ಲಿ ಸಮರ್ಪಕ ಕಾರ್ಯ ಜರುಗಿಸದೇ ಇರುವುದಕ್ಕೆ ಸಾಮಾಜಿಕ ಹೋರಾಟಗಾರ ರವೀಂದ್ರ ನಾಯ್ಕ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.