ಬೆಂಗಳೂರು: ಸೆಪ್ಟೆಂಬರ್ 12ರಿಂದ 10 ದಿನಗಳ ಕಾಲ ವಿಧಾನಸಭೆ ಅಧಿವೇಶನ ನಡೆಯಲಿದ್ದು, ಈ ಸಂಬಂಧ ಕರ್ನಾಟಕ ವಿಧಾನಸಭೆ ಕಾರ್ಯದರ್ಶಿ ಎಂ.ಕೆ.ವಿಶಾಲಾಕ್ಷಿ ಅವರು ಸುತ್ತೋಲೆ ಹೊರಡಿಸಿದ್ದಾರೆ.
ಇದೇ ಆಗಸ್ಟ್ 25ರಂದು ಸಿಎಂ ಬಸವರಾಜ ಬೊಮ್ಮಾಯಿ ಅವರ ನೇತೃತ್ವದಲ್ಲಿ ನಡೆದಿದ್ದ ಸಚಿವ ಸಂಪುಟ ಸಭೆಯಲ್ಲಿ ಸೆಪ್ಟೆಂಬರ್ 12ರಿಂದ 10 ದಿನಗಳ ಕಾಲ ವಿಧಾನಮಂಡಲ ಅಧಿವೇಶನ ನಡೆಸಲು ತೀರ್ಮಾನ ಕೈಗೊಳ್ಳಲಾಗಿತ್ತು. ಇದೀಗ ಅಧಿವೇಶನ ಆರಂಭದ ಸಿದ್ಧತೆಗಳಿಗೆ ಅಧಿಕೃತವಾಗಿ ಚಾಲನೆ ನೀಡಲಾಗಿದೆ.
ವಿಧಾನಸೌಧದಲ್ಲಿ 10 ದಿನಗಳ ಕಾಲ ಅಧಿವೇಶನ ನಡೆಯಲಿದೆ ಎಂದು ಕಂದಾಯ ಸಚಿವ ಆರ್ ಅಶೋಕ್ ತಿಳಿಸಿದ್ದರು. ರಾಜ್ಯದಲ್ಲಿ ಹಾಲಿ ಅತಿವೃಷ್ಟಿಯಿಂದ ಆಗಿರುವ ಹಾನಿಗೆ ಪರಿಹಾರ, ಹೈಕೋರ್ಟ್ ಆದೇಶದಂತೆ ಭ್ರಷ್ಟಾಚಾರ ನಿಗ್ರಹ ದಳ, ಲೋಕಾಯುಕ್ತದೊಂದಿಗೆ ವಿಲೀನವಾಗಿರುವ ಹಿನ್ನೆಲೆಯಲ್ಲಿ ಸರ್ಕಾರ ಈ ಸಂಬಂಧ ಅಂತಿಮ ಅಧಿಸೂಚನೆ ಪ್ರಕಟಿಸಲಿದೆ.
ಅಧಿವೇಶನದಲ್ಲಿ ಕಾಂಗ್ರೆಸ್-ಬಿಜೆಪಿ ಜಟಾಪಟಿ ಸಾಧ್ಯತೆ: ಸರ್ಕಾರ ವಿರುದ್ಧ ಗುತ್ತಿಗೆದಾರರ ಸಂಘ ಕಮಿಷನ್ ಆರೋಪ ಮಾಡಿದ ನಂತರ ವಿಧಾನಮಂಡಲ ಅಧಿವೇಶನ ಕರೆಯಬೇಕೆಂದು ವಿಪಕ್ಷ ಕಾಂಗ್ರೆಸ್ ತೀವ್ರ ಒತ್ತಾಯಿಸಿತ್ತು. ಇದರ ಬೆನ್ನಲ್ಲೇ ಹಿಜಾಬ್ ವಿವಾದ, ಕರಾವಳಿ ಸರಣಿ ಹತ್ಯೆ, ಸಿದ್ದರಾಮಯ್ಯ ಮೊಟ್ಟೆ ಎಸೆತ ಪ್ರಕರಣ ಸೇರಿದಂತೆ ಹಲವು ವಿಚಾರಗಳು ಚರ್ಚೆಗೆ ಬರುವ ಸಾಧ್ಯತೆ ಇದೆ. ಪ್ರಮುಖವಾಗಿ ಸರ್ಕಾರದ ಮೇಲಿನ ಕಮಿಷನ್ ಆರೋಪ, ಕರಾವಳಿ ಸೇರಿದಂತೆ ವಿವಿಧ ಭಾಗಗಳಲ್ಲಿ ನಡೆಯುತ್ತಿರುವ ಧರ್ಮ ದಂಗಲ್, ಮಳೆ, ಪ್ರವಾಹ ವಿಪತ್ತು ಪರಿಹಾರ ಕುರಿತು ಆಡಳಿತ ಮತ್ತು ವಿಪಕ್ಷಗಳ ಮಧ್ಯೆ ತೀವ್ರ ಚರ್ಚೆ, ಕೋಲಾಹಲ ನಡೆಯುವ ಸಾಧ್ಯತೆಯಿದೆ ಎನ್ನಲಾಗಿದೆ