ಶಿರಸಿ: ದೇಶದ 75 ನೇ ಸ್ವಾತಂತ್ರೋತ್ಸವ ಅಮೃತ ಮಹೋತ್ಸವದ ಅಂಗವಾಗಿ ಗ್ರಾಮೀಣ ಭಾಗದ ಪ್ರಮುಖ ಸಮಸ್ಯೆಗಳನ್ನು ಸರಕಾರದ ಗಮನ ಸೆಳೆಯುವ ಉದ್ದೇಶದಿಂದ 75 ಗ್ರಾಮ ಪಂಚಾಯತ ವ್ಯಾಪ್ತಿಯಲ್ಲಿ ಭೂಮಿ ಹಕ್ಕು, ಮೂಲ ಸೌಕರ್ಯಕ್ಕಾಗಿ ‘ಹಳ್ಳಿ ಕಡೆ ನಡಿಗೆ’ ಜಿಲ್ಲಾಮಟ್ಟದ ಬೃಹತ್ ಕಾರ್ಯಕ್ರಮ ಜರುಗಿಸಿ ಸಮಸ್ಯೆ ಬಗೆಹರಿಸಲು ಸರಕಾರಕ್ಕೆ ಅಗ್ರಹಿಸಲಾಯಿತು.
ಜಿಲ್ಲಾ ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆ ಆಶ್ರಯದಲ್ಲಿ ಜಿಲ್ಲಾಧ್ಯಕ್ಷ ರವೀಂದ್ರ ನಾಯ್ಕ ನೇತ್ರತ್ವದಲ್ಲಿ ಆ.29ರಂದು ದೇವನಳ್ಳಿ ಗ್ರಾಮ ಪಂಚಾಯತಿಯ ವ್ಯಾಪ್ತಿಯ, ಕರೂರ ಈಶ್ವರ ದೇವಾಲಯದಿಂದ ‘ಹಳ್ಳಿ ಕಡೆ ನಡೆ’ ಕಾರ್ಯಕ್ರಮ ಪ್ರಾರಂಭವಾಗಿ 7 ಕೀ.ಮೀ ಸಂಚರಿಸಿ ಗ್ರಾಮ ಪಂಚಾಯತ ಆವರಣದಲ್ಲಿ ಜರುಗಿದ ಸಭೆಯಲ್ಲಿ ತಹಶೀಲ್ದಾರ್ ಶ್ರೀಧರ ಮಂದಲಮನಿಯವರಿಗೆ ಸರಕಾರದ ಪರವಾಗಿ ಮನವಿ ಸಲ್ಲಿಸಲಾಯಿತು.
ಗ್ರಾಮ ಪಂಚಾಯತ ವ್ಯಾಪ್ತಿಯಿಂದ ಬಂದಿರುವಂತಹ ಗ್ರಾಮಸ್ಥರು ಮೂಲಭೂತ ಸೌಕರ್ಯಗಳಾದ ರಸ್ತೆ, ಶೌಚಾಲಯ, ಸೇತುವೆ, ಕಾಲುಸಂಕ, ವಸತಿಗಾಗಿ, ಅರಣ್ಯ ಹಕ್ಕು ಕಾಯಿದೆಯಲ್ಲಿ ಅರ್ಜಿ, ಜಿಪಿಎಸ್ ಕಡಿಮೆ ಮಾಡಿರುವಂತದಕ್ಕೆ ಮೇಲ್ಮನವಿ ಅರ್ಜಿ, ಬೀದಿದೀಪ, ಸಾರ್ವಜನಿಕ ಕೆರೆ ದುರಸ್ಥಿ ಮುಂತಾದವುಗಳ ಸಮಸ್ಯೆಗಳ ಪರಿಹಾರಕ್ಕಾಗಿ ವೈಯಕ್ತಿಕ ಅರ್ಜಿಗಳನ್ನು ಸಲ್ಲಿಸಿದರು.
ಸೌಲಭ್ಯ ವಂಚಿತ ಗ್ರಾಮ ಪಂಚಾಯತ:ಗ್ರಾಮ ಪಂಚಾಯತ ವ್ಯಾಪ್ತಿಯಲ್ಲಿ ಶೌಚಾಲಯ ವ್ಯವಸ್ಥೆ ಇಲ್ಲದ ಮನೆ 251, ಅರಣ್ಯ ಭೂಮಿ ಅತಿಕ್ರಮಣದಾರರ ಭೂಮಿ ಹಕ್ಕು ವಂಚಿತ ಕುಟುಂಬ 363, 70 ಕ್ಕೂ ಮಿಕ್ಕಿ ಹಳ್ಳಿಗಳಲ್ಲಿ ರಸ್ತೆಯ ಸಮಸ್ಯೆ, ವಸತಿ ಇಲ್ಲದವರು, ಬೀದಿದೀಪ ಹಾಗೂ 17 ಕೆರೆ ಹೊಳೆತ್ತುವಿಕೆಯ ಸಮಸ್ಯೆ ಮುಂತಾದ ಸಮಸ್ಯೆಗಳ ಕುರಿತು ಪರಿಹಾರಕ್ಕಾಗಿ ಜಿಲ್ಲಾಧಿಕಾರಿಗಳಿಗೆ ನೀಡಿದ ಮನವಿಯಲ್ಲಿ ಪ್ರಸ್ತಾಪಿಸಲಾಗಿದೆ.
ಸಮಸ್ಯೆ ಬಗೆಹರಿಸಲು ತೀವ್ರ ಆಕ್ರೋಶ : ಗ್ರಾಮ ಪಂಚಾಯತ ವಿವಿಧ ಹಳ್ಳಿಗಳಿಂದ ಬಂದಂತಹ ಗ್ರಾಮಸ್ಥರು ಮೂಲಭೂತ ಸೌಕರ್ಯ, ಭೂಮಿ ಹಕ್ಕಿಗಾಗಿ ಆಗ್ರಹಿಸಿ ಭಾಷಣ ಮತ್ತು ಘೋಷಣೆ ಮೂಲಕ ಆಗ್ರಹಿಸಿ ಸಭೆಯಲ್ಲಿ ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ಆಗಮಿಸಿರುವುದು ಕಾರ್ಯಕ್ರಮದ ವಿಶೇಷವಾಗಿತ್ತು.
ಕಾರ್ಯಕ್ರಮದಲ್ಲಿ ದೇವರಾಜ ಮರಾಠಿ ಸ್ವಾಗತಿಸಿ, ತಾಲೂಕ ಸಂಚಾಲಕ ಕಿರಣ ಮರಾಠಿ ಪ್ರಾಸ್ತವಿಕ ಮಾತನಾಡಿದರು. ಅಂಕೋಲಾ ತಾಲೂಕ ಅಧ್ಯಕ್ಷ ರಮಾನಂದ ನಾಯ್ಕ ಅಚಿವೆ, ನೆಹರೂ ನಾಯ್ಕ, ಎಮ್ ಆರ್ ನಾಯ್ಕ, ಎಮ್ ಕೆ ನಾಯ್ಕ, ಚಂದ್ರು ನಾಯ್ಕ, ರಾಮಚಂದ್ರ ಮರಾಠಿ ಮುಂತಾದವರು ಉಪಸ್ಥಿತರಿದ್ದರು.
ಸಭೆಯಲ್ಲಿ ಮಾರುತಿ ನಾಯ್ಕ, ವೆಂಕಟು ಗೌಡ, ರಾಮು ಗೌಡ, ತಿಮ್ಮ ರಾಮ ಗೌಡ, ಗೋವಿಂದ ಯಂಕು ಗೌಡ, ಕೆರಿಯಾ ಗಿಡ್ಡ ಗೌಡ, ಅಜೀತ್ ಮಾದೇವ ನಾಯ್ಕ, ರಾಮಚಂದ್ರ ಮರಾಠಿ, ಈಶ್ವರ ಗೌಡ, ಕೃಷ್ಣ ಗೌಡ ಮುಂತಾದವರು ಮಾತನಾಡಿ ಸ್ಥಳೀಯ ಸಮಸ್ಯೆಗಳ ಕುರಿತು ಪ್ರಸ್ತಾಪಿಸಿದರು.