ಶಿರಸಿ : ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಉತ್ತರ ಕನ್ನಡ ಜಿಲ್ಲಾ ಸಿವಿಲ್ ಗುತ್ತಿಗೆದಾರರ ಸಂಘದ ವತಿಯಿಂದ ಲೊಕೊಪಯೋಗಿ ಸಚಿವರನ್ನು ಭೇಟಿ ಮಾಡಿ ಮನವಿ ಸಲ್ಲಿಸಲಾಗಿದೆ.
ಬೆಂಗಳೂರಿನ ಕಚೇರಿಯಲ್ಲಿ ಸಚಿವ ಸಿಸಿ ಪಾಟೀಲ್ ಅವರನ್ನು ಶುಕ್ರವಾರ ಭೇಟಿ ಮಾಡಿದ ಗುತ್ತಿಗೆದಾರ ಸಂಘದ ಸದಸ್ಯರು ಮುಖ್ಯವಾಗಿ ನಾಲ್ಕು ಪ್ರಮುಖ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿದರು.
ಗಣಿ ಮತ್ತು ಭೂ ವಿಜ್ಞಾನ ಇಲಾಖೆಗೆ ನೀಡುವ ರಾಜಧನವನ್ನು ಹೆಚ್ಚಳ ಮಾಡಿರುವ ಕಾರಣ ಅದನ್ನು ಕಡಿಮೆ ಮಾಡುವಂತೆ ಮನವಿಯಲ್ಲಿ ವಿನಂತಿಸಲಾಗಿದೆ. ಜೊತೆಗೆ ಈ ಹಿಂದೆ ಕೆಲಸ ಆಗಿ ಬಾಕಿ ಉಳಿದಿರುವ ಬಿಲ್ಲುಗಳಿಗೆ ಶೆ.೧೮ ರಷ್ಟು ಜಿಎಸ್ಟಿ ನೀಡಬೇಕು, ಮಳೆಗಾಲ ಹೊರತುಪಡಿಸಿ ಗುತ್ತಿಗೆ ಕೆಲಸವನ್ನು ಮುಗಿಸಲು ಸಮಯ ನಿರ್ಧರಿಸಬೇಕು ಹಾಗೂ ಕಳೆದ ವರ್ಷ ಮಳೆಗಾಲದ ಸಂದರ್ಭದಲ್ಲಿ ಮಾಡಿದ ಕೆಲಸದ ಬಾಕಿ ಇರುವ ೮೦ ಕೋಟಿ ರೂ. ಹಣವನ್ನು ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿದರು.
ಗುತ್ತಿಗೆದಾರರ ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸಿದ ಸಚಿವರು ಬೇಡಿಕೆ ಈಡೇರಿಸುವುದಾಗಿ ಭರವಸೆ ನೀಡಿದ್ದಾಗಿ ಸಂಘದ ಸದಸ್ಯರು ತಿಳಿಸಿದ್ದಾರೆ. ಈ ಸಂದರ್ಭದಲ್ಲಿ ಸಂಘದ ಜಿಲ್ಲಾಧ್ಯಕ್ಷ ರಾಮನಾಥ ಶಾನಭಾಗ, ಉಪಾಧ್ಯಕ್ಷ ರಮೇಶ ದುಭಾಶಿ, ಕೋಶಾಧ್ಯಕ್ಷ ಗಣೇಶ ದಾವಣಗೆರೆ ಇದ್ದರು.